ಉಡುಪಿ: ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬಂಧಿತರಿಂದ ಸುಮಾರು 23,56,230 ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೆರಂಪಳ್ಳಿ ಕುಂಜಿಬೆಟ್ಟುವಿನ ಅರುಣ್ ಎಸ್.ವಿ. ಅಲಿಯಾಸ್ ಅರುಣ್ ಆಚಾರಿ (43) ಹಾಗೂ ತೆಂಕನಿಡಿಯೂರಿನ ಕೌಶೀಕ್ (19) ಬಂಧಿತ ಆರೋಪಿಗಳು.
ಪುತ್ತೂರು ಗ್ರಾಮದ ಭಗವತಿ ಲೇಔಟ್ ನಿವಾಸಿ ಸನಂ ಎಂಬುವರು ವಿದೇಶದಲ್ಲಿದ್ದ ಗಂಡನ ಮನೆಗೆ ಬಂದಿದ್ದು, ಆಗಸ್ಟ್ 8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆಗಸ್ಟ್ 11ರಂದು ವಾಪಸ್ ಬಂದು ನೋಡಿದಾಗ ಮನೆಯ ಟೆರೇಸ್ ಬಾಗಿಲು ಮುರಿದು ಕಪಾಟಿನಲ್ಲಿದ್ದ ವಿದೇಶಿ ಕರೆನ್ಸಿ ಸೇರಿದಂತೆ 2.14 ಲಕ್ಷ ರೂ. ಕಳುವಾಗಿತ್ತು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ (ಅಕ್ರ 108/2026) ಪ್ರಕರಣ ದಾಖಲಾಗಿತ್ತು.
ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಮಾರ್ಗದರ್ಶನದಲ್ಲಿ, ಉಪನಿರೀಕ್ಷಕ ಪ್ರಕಾಶ್ ನೇತೃತ್ವದ ವಿಶೇಷ ಪಡೆ ಆಗಸ್ಟ್ 23ರಂದು ಪೆರಂಪಳ್ಳಿಯ ಸಂತೋಷ ನಗರದಲ್ಲಿ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿತು.
ವಶಪಡಿಸಿಕೊಂಡ ಸಾಮಗ್ರಿಗಳು:
ಚಿನ್ನದ ಆಭರಣಗಳು ಹಾಗೂ ನಾಣ್ಯ: 88.400 ಗ್ರಾಂ ತೂಕದ ಚಿನ್ನ (ಮೌಲ್ಯ ₹13,26,000) ಹಾಗೂ 1.45 ಗ್ರಾಂ ಚಿನ್ನದ ನಾಣ್ಯ (ಮೌಲ್ಯ ₹22,500)
ಬೆಳ್ಳಿ ಆಭರಣಗಳು: 1 ಕೆಜಿ 360 ಗ್ರಾಂ (ಮೌಲ್ಯ ₹2,86,730)
ವಿದೇಶಿ ಕರೆನ್ಸಿ ಮತ್ತು ನಗದು: ₹2,00,000 ಮೌಲ್ಯದ ವಿದೇಶಿ ನೋಟುಗಳು ಹಾಗೂ ₹33,000 ನಗದು
ವಾಹನಗಳು: ಆಟೋರಿಕ್ಷಾ (ಮೌಲ್ಯ ₹4,00,000) ಮತ್ತು ಕೃತ್ಯಕ್ಕೆ ಬಳಸಿದ ಕಳವು ಮಾಡಿದ್ದ ಪಲ್ಸರ್ ಬೈಕ್ (ಮೌಲ್ಯ ₹45,000)
ಇತರ ಸಾಮಗ್ರಿಗಳು: 2 ಮೊಬೈಲ್ ಫೋನ್ಗಳು (₹13,000) ಹಾಗೂ 1 ವಿದೇಶಿ ಕೈಗಡಿಯಾರ (₹30,000)
ಆರೋಪಿಗಳು ಕಳವು ಮಾಡಿದ ಬೈಕ್ನಲ್ಲಿ ತೆರಳಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ಉಡುಪಿ ನಗರ ಠಾಣೆಯ 2 ಹಾಗೂ ಮಲ್ಪೆ ಠಾಣಾ ವ್ಯಾಪ್ತಿಯ 3 (ಒಂದು ಬೈಕ್ ಕಳವು ಸೇರಿದಂತೆ) ಒಟ್ಟು 5 ಸರಣಿ ಕಳ್ಳತನ ಪ್ರಕರಣಗಳು ಈ ಬಂಧನದಿಂದ ಬೆಳಕಿಗೆ ಬಂದಿವೆ. ಆರೋಪಿ ಅರುಣ್ ಆಚಾರಿ ಈ ಹಿಂದೆ ಪೋಕ್ಸೋ (POCSO) ಪ್ರಕರಣದಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿ, ಜುಲೈ 2025ರಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಎನ್ನಲಾಗಿದೆ








