ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ತಮ್ಮನೇ ಅಣ್ಣನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಬಿಜೈ-ಕೊಟ್ಟಾರ ಕ್ರಾಸ್ ಬಳಿ ಆ.30ರ ರಾತ್ರಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಅಡಿವೆಪ್ಪ (40) ಮೃತಪಟ್ಟಿದ್ದು, ಅವರ ತಮ್ಮ ರಾಜು (36) ಕೊಲೆ ಆರೋಪಿಯಾಗಿದ್ದಾನೆ.
ಅಡಿವೆಪ್ಪ ಮತ್ತು ರಾಜು ತಮ್ಮ ತಾಯಿಯೊಂದಿಗೆ ಕೊಟ್ಟಾರ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಸುಮಾರು ಒಂದು ವರ್ಷದಿಂದ ವಾಸವಾಗಿದ್ದರು. ತಾಯಿ ಗೂಡಂಗಡಿ ನಡೆಸುತ್ತಿದ್ದು, ಇಬ್ಬರು ಸಹೋದರರು ಕೂಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರೂ ವಿಪರೀತ ಮದ್ಯಸೇವನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಪತ್ನಿಯರು ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೊಬೈಲ್ ಫೋನ್ ವಿಚಾರಕ್ಕೆ ಆರಂಭವಾಗಿದ್ದ ಜಗಳ
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಆ.30ರಂದು ಸಂಜೆ ಸುಮಾರು 6 ಗಂಟೆಗೆ ತಾಯಿ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಅಡಿವೆಪ್ಪ ಮತ್ತು ರಾಜು ಮದ್ಯ ಸೇವಿಸಿ ಅಲ್ಲಿಗೆ ಬಂದಿದ್ದರು. ಈ ವೇಳೆ ಅಡಿವೆಪ್ಪ, ರಾಜುವಿನ ಮೊಬೈಲ್ ಫೋನ್ ತೆಗೆದುಕೊಂಡಿದ್ದರು. ತಾಯಿ ಬುದ್ಧಿವಾದ ಹೇಳಿ ಮೊಬೈಲ್‌ನ್ನು ರಾಜುವಿಗೆ ವಾಪಸ್ ಕೊಡಿಸಿದ್ದರು. ಬಳಿಕ ಸಂಜೆ 6.30ರ ಸುಮಾರಿಗೆ ಇಬ್ಬರೂ ಮನೆಗೆ ತೆರಳಿದ್ದರು.
ರಾತ್ರಿ ಸುಮಾರು 10.45ರ ವೇಳೆಗೆ ಮನೆಯ ಪಕ್ಕದ ನಿವಾಸಿ ಪ್ರೀತಮ್ ಗೂಡಂಗಡಿಗೆ ಬಂದು, ಅಡಿವೆಪ್ಪ ಮತ್ತು ರಾಜು ಪರಸ್ಪರ ಹೊಡೆದಾಡಿಕೊಂಡಿದ್ದು ಮನೆಯಲ್ಲಿ ರಕ್ತ ಬಿದ್ದಿರುವುದಾಗಿ ತಾಯಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಪ್ರೀತಮ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎದೆಗೆ ಚಾಕುವಿನಿಂದ ಇರಿತ
ಮನೆಗೆ ತೆರಳಿ ನೋಡಿದಾಗ ಅಡಿವೆಪ್ಪ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ರಾಜು ಚಾಕುವಿನಿಂದ ಅಣ್ಣನ ಎದೆಗೆ ಇರಿದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತೀವ್ರ ರಕ್ತಸ್ರಾವವಾಗಿದ್ದ ಅಡಿವೆಪ್ಪ ಅವರನ್ನು ಆಂಬುಲೆನ್ಸ್ ಮೂಲಕ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಗಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪತ್ನಿಗೆ ಮಾಹಿತಿ ನೀಡಿ ದೂರು
ಘಟನೆಯ ಬಳಿಕ ಅಡಿವೆಪ್ಪ ಅವರ ಪತ್ನಿ ರೇಖಾ ಅವರಿಗೆ ವಿಷಯ ತಿಳಿಸಲಾಗಿದ್ದು, ಅವರು ಮಕ್ಕಳೊಂದಿಗೆ ಕಾವೂರಿನಲ್ಲಿ ವಾಸವಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಮೃತನ ತಾಯಿ ಮತ್ತು ರೇಖಾ ಅವರು ಠಾಣೆಗೆ ಬಂದು ದೂರು ನೀಡಿದ್ದಾರೆ.
ತಮ್ಮ ಮಗ ಅಡಿವೆಪ್ಪನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ರಾಜು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಉರ್ವ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








