ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದ ಸಿಬ್ಬಂದಿಗೆ ಮೂಲಸೌಕರ್ಯಗಳನ್ನು ಒದಗಿಸಲು ಸಹಾಯ ಮಾಡುವ ಉದ್ದೇಶದಿಂದ ಭಕ್ತೆಯೊಬ್ಬರು ನೀಡಿದ್ದ 4 ಕೋಟಿ ರೂಪಾಯಿ ಮೌಲ್ಯದ ಬೃಹತ್ ಚೆಕ್ ಬೌನ್ಸ್ ಆಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಚೆಕ್ ಅನ್ನು ಬ್ಯಾಂಕ್‌ಗೆ ಸಲ್ಲಿಸಿದಾಗ, ಆ ಖಾತೆಯಲ್ಲಿ ಇದ್ದದ್ದು ಕೇವಲ 3 ರೂಪಾಯಿ ಮಾತ್ರ!
ಲಿಖಿತ ಭರವಸೆ ಕೋರಿದ್ದ ಭಕ್ತೆ
ಚೆನ್ನೈ ಮೂಲದ ಮಹಿಳಾ ಭಕ್ತಿಯೊಬ್ಬರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಈ 4 ಕೋಟಿ ರೂ. ಚೆಕ್ ಅನ್ನು ನೀಡಿದ್ದರು. ಇದರ ಜೊತೆಗೆ ದೇವಾಲಯಕ್ಕೆ 10,000 ರೂಪಾಯಿ ನಗದನ್ನು ಪ್ರತ್ಯೇಕವಾಗಿ ದೇಣಿಗೆ ನೀಡಿದ್ದರು. ಆದರೆ, ತಮ್ಮ 4 ಕೋಟಿ ಹಣವನ್ನು ಕೇವಲ ದೇವಾಲಯದ ಸಿಬ್ಬಂದಿಯ ಸೌಲಭ್ಯಗಳಿಗಾಗಿಯೇ ಬಳಸಬೇಕು ಎಂದು ಅವರು ಟ್ರಸ್ಟ್‌ನಿಂದ ಲಿಖಿತ ಭರವಸೆಗೆ ಪಟ್ಟು ಹಿಡಿದಿದ್ದರು. ಟ್ರಸ್ಟ್ ಅಂತಹ ಯಾವುದೇ ವಿಶೇಷ ಲಿಖಿತ ಭರವಸೆ ನೀಡಲು ನಿರಾಕರಿಸಿತ್ತು. ಖಾತೆಯಲ್ಲಿ ಹಣವಿಲ್ಲದಿದ್ದರೂ ಇಷ್ಟೊಂದು ದೊಡ್ಡ ಮೊತ್ತದ ಚೆಕ್ ನೀಡಿದ್ದಕ್ಕೆ ವಿವರಣೆ ಕೋರಿ ಬ್ಯಾಂಕ್ ಈಗ ಆ ಮಹಿಳೆಗೆ ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದ್ದು, ಟ್ರಸ್ಟ್ ಆಕೆಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದೆ.
ಮುಂಚೆಯೂ ಬೌನ್ಸ್ ಆಗಿದ್ದವು ಕೋಟ್ಯಂತರ ರೂ. ಚೆಕ್‌ಗಳು!
ದೇವಾಲಯದ ನಿರ್ಮಾಣಕ್ಕಾಗಿ ದೇಶಾದ್ಯಂತ ಕೋಟ್ಯಂತರ ರೂಪಾಯಿ ನಿಧಿ ಸಂಗ್ರಹವಾಗುತ್ತಿದ್ದು, ಈ ಮಧ್ಯೆ ಇಂತಹ ವಿಚಿತ್ರ ಪ್ರಕರಣಗಳು ವರದಿಯಾಗುತ್ತಿವೆ. 2020 ರಲ್ಲಿ ನಡೆದ ‘ನಿಧಿ ಸಮರ್ಪಣ ಅಭಿಯಾನ’ದ 45 ದಿನಗಳಲ್ಲಿ ಬರೋಬ್ಬರಿ 3,500 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಆ ಸಮಯದಲ್ಲಿಯೂ ತಾಂತ್ರಿಕ ಕಾರಣಗಳು ಹಾಗೂ ಹಣದ ಅಭಾವದಿಂದ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಚೆಕ್‌ಗಳು ಬೌನ್ಸ್ ಆಗಿದ್ದವು. ಅದರಲ್ಲಿ ಹೆಚ್ಚಿನ ಮೊತ್ತವನ್ನು ನಂತರ ವಸೂಲಿ ಮಾಡಲಾಗಿದೆಯಾದರೂ, ಇಂದಿಗೂ ಸುಮಾರು 22 ಕೋಟಿ ರೂಪಾಯಿ ಬಾಕಿ ಉಳಿದಿದೆ.
ಪ್ರಸ್ತುತ ರಾಮಮಂದಿರಕ್ಕೆ ಪ್ರತಿ ತಿಂಗಳು ನಗದು, ಆನ್‌ಲೈನ್ ಹಾಗೂ ಚೆಕ್‌ಗಳ ಮೂಲಕ ಅಂದಾಜು 3 ರಿಂದ 4 ಕೋಟಿ ರೂಪಾಯಿ ದೇಣಿಗೆ ಹರಿದುಬರುತ್ತಿದ್ದು, ಇದರಲ್ಲಿ ಚೆಕ್‌ಗಳ ಮೂಲಕವೇ ತಿಂಗಳಿಗೆ 1 ರಿಂದ 1.5 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ.








