ಚಿಕ್ಕೋಡಿ: ತಪ್ಪು ಮಾಡಿದ ಆರೋಪಿಗೆ ದಂಡ ಅಥವಾ ಸಾಂಪ್ರದಾಯಿಕ ಶಿಕ್ಷೆ ವಿಧಿಸುವ ಬದಲು 50 ಸಸಿಗಳನ್ನು ನೆಡುವಂತೆ ಕೋರ್ಟ್ ಆದೇಶ ನೀಡಿರುವುದು ಗಮನ ಸೆಳೆದಿದೆ. ಕುಡಿದು ಗಲಾಟೆ ಮಾಡಿದ ಆರೋಪಿಗೆ ಚಿಕ್ಕೋಡಿ JMFC ನ್ಯಾಯಾಲಯ ವಿಭಿನ್ನ ರೀತಿಯ ಶಿಕ್ಷೆ ಪ್ರಕಟಿಸಿದೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಅನಿಲ ನಿಂಗಪ್ಪ ಪೂಜಾರಿ ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಕುಡಿದು ಗಲಾಟೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿ ತನ್ನ ತಪ್ಪನ್ನು ಸ್ವಯಂಪ್ರೇರಿತವಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಸಸಿ ನೆಡಲು ಆದೇಶ
ನ್ಯಾಯಾಲಯದ ಆದೇಶದಂತೆ ಆರೋಪಿ ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ 25 ಸಸಿಗಳು ಹಾಗೂ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ 25 ಸಸಿಗಳು ಸೇರಿದಂತೆ ಒಟ್ಟು 50 ಸಸಿಗಳನ್ನು ನೆಟ್ಟಿದ್ದಾನೆ. ವಿಶೇಷವೆಂದರೆ, ಆರೋಪಿ ತನ್ನ ಪತ್ನಿಯೊಂದಿಗೆ ಸೇರಿ ಕೋರ್ಟ್ ಆವರಣ ಹಾಗೂ ಪೊಲೀಸ್ ಠಾಣೆ ಆವರಣದಲ್ಲಿ ಸಸಿ ನೆಡುವ ಮೂಲಕ ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದಾನೆ.
ತಪ್ಪಿಗೆ ಶಿಕ್ಷೆಯಾಗಿ ಪರಿಸರ ಬೆಳೆಸುವಂತಹ ಕ್ರಮಕ್ಕೆ ನ್ಯಾಯಾಲಯ ಮುಂದಾಗಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಸಾಮಾನ್ಯ ಶಿಕ್ಷೆಯ ಬದಲಿಗೆ ಮರ-ಗಿಡಗಳನ್ನು ಬೆಳೆಸುವ ಮೂಲಕ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಶಿಕ್ಷೆ ನೀಡಿರುವುದು ವಿಭಿನ್ನ ತೀರ್ಪು ಎಂಬ ಚರ್ಚೆ ನಡೆಯುತ್ತಿದೆ. ಕುಡಿದು ಗಲಾಟೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ 50 ಸಸಿ ನೆಡುವಂತೆ ಆದೇಶಿಸುವ ಮೂಲಕ ಚಿಕ್ಕೋಡಿ JMFC ನ್ಯಾಯಾಲಯದ ಕ್ರಮ ಇದೀಗ ಗಮನ ಸೆಳೆದಿದೆ.








