ನೆಲಮಂಗಲ: ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ಜ್ಯುವೆಲರಿ ದರೋಡೆ ಯತ್ನ ಹಾಗೂ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಶೂಟರ್‌ಗಳ ಕ್ರೈಂ ನೆಟ್‌ವರ್ಕ್ ನಂಟು ಬೆಳಕಿಗೆ ಬಂದಿದೆ.
ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ನೆಲಮಂಗಲ ಪೊಲೀಸರು ಆರೋಪಿಗಳ ಸುಳಿವು ಬೆನ್ನತ್ತಿ ಹೊರರಾಜ್ಯಗಳಲ್ಲಿ ತಲಾಶ್ ನಡೆಸುತ್ತಿದ್ದಾರೆ.
ಏನಿದು ದರೋಡೆ ಪ್ರಕರಣ?
ಕಳೆದ ಆಗಸ್ಟ್ 6ರಂದು ದಾಬಸ್‌ಪೇಟೆಯಲ್ಲಿದ್ದ ‘ಪ್ರೇಮ್ ಶಿವ ಜ್ಯುವೆಲರಿ’ ಅಂಗಡಿಗೆ ನುಗ್ಗಿದ್ದ ಸಶಸ್ತ್ರ ದರೋಡೆಕೋರರ ಗುಂಪು, ಜ್ಯುವೆಲರಿ ಮಾಲೀಕ ಕುನ್ನಾರಾಮ್ ಅವರ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿತ್ತು. ಆದರೆ ಮಾಲೀಕ ಪ್ರತಿರೋಧ ಒಡ್ಡಿದ್ದರಿಂದ ಹೆದರಿದ ಆರೋಪಿಗಳು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆ ಸ್ಥಳೀಯವಾಗಿ ತೀವ್ರ ಸಂಚಲನ ಸೃಷ್ಟಿಸಿತ್ತು. ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಪೊಲೀಸರು ವಿಶೇಷ ಪಡೆ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ತನಿಖೆ ವೇಳೆ ಈ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಎಂಬಾತನ ಕ್ರಿಮಿನಲ್ ಹಿನ್ನೆಲೆ ಬಯಲಾಗಿದೆ. ದಾಬಸ್‌ಪೇಟೆಯಲ್ಲಿ ಕೃತ್ಯ ಎಸಗಿದ ಬೆನ್ನಲ್ಲೇ ರಾಜಸ್ಥಾನಕ್ಕೆ ಕಾಲ್ಕಿತ್ತಿದ್ದ ಈತ, ಅಲ್ಲಿನ ‘ಗಾಂಧಿ ವಾಟಿಕ’ ಎಂಬ ಪ್ರದೇಶದಲ್ಲಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಇನ್ನೊಬ್ಬ ವ್ಯಕ್ತಿಯ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದ. ಅಲ್ಲಿಂದಲೂ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ ರಾಹುಲ್‌ನನ್ನು ರಾಜಸ್ಥಾನ ಪೊಲೀಸರು ಸತತವಾಗಿ ಬೆನ್ನಟ್ಟಿ, ಅಂತಿಮವಾಗಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ ಪ್ರಕರಣ
ಪ್ರಸ್ತುತ ರಾಜಸ್ಥಾನದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ನನ್ನು ಅಲ್ಲಿನ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೈಲಿಗಟ್ಟಿದ್ದಾರೆ. ಇದೀಗ ದಾಬಸ್‌ಪೇಟೆ ಜ್ಯುವೆಲರಿ ಶಾಪ್ ಶೂಟೌಟ್ ಪ್ರಕರಣದಲ್ಲೂ ರಾಹುಲ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲು ನೆಲಮಂಗಲ ಪೊಲೀಸರು ಪ್ರಕ್ರಿಯೆ ಆರಂಭಿಸಿದ್ದಾರೆ.
ಈ ದರೋಡೆ ಯತ್ನದ ಹಿಂದೆ ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಸಂಘಟಿತ ಅಪರಾಧ ಜಾಲದ ಕೈವಾಡವಿದೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳಿಗಾಗಿ ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳಲ್ಲಿ ಪೊಲೀಸರ ತಂಡಗಳು ತೀವ್ರ ಶೋಧ ನಡೆಸುತ್ತಿವೆ. ಒಟ್ಟಾರೆಯಾಗಿ ನೆಲಮಂಗಲದಿಂದ ಆರಂಭವಾದ ಈ ಶೂಟೌಟ್ ತನಿಖೆ ಇದೀಗ ಉತ್ತರ ಪ್ರದೇಶದವರೆಗೆ ತಲುಪಿದ್ದು, ಪ್ರಕರಣದ ಮುಂದಿನ ಹಂತದ ತನಿಖೆ ತೀವ್ರ ಕುತೂಹಲ ಮೂಡಿಸಿದೆ.








