ಅತ್ಯಂತ ಅಚ್ಚರಿ ಹಾಗೂ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾಣೆಯಾಗಿದ್ದ 29 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ಭಾವಿಸಿ, ಆತನ ಕುಟುಂಬಸ್ಥರು ಗುರುತು ಸಿಗದ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸಿ ತಿಂಗಳ ನಂತರ, ಆ ಯುವಕ ಸಜೀವವಾಗಿ ಮನೆಗೆ ಮರಳಿದ್ದಾನೆ.
ಧೇಂಖನಾಲ್ ಜಿಲ್ಲೆಯ ಸನಾತನ ನಾಯಕ್ (29) ಎಂಬ ಯುವಕ ಕಳೆದ ಜುಲೈ 27 ರಂದು ಸೈಕಲ್‌ನಲ್ಲಿ ಮನೆಯಿಂದ ಹೊರಟು ಕಾಣೆಯಾಗಿದ್ದ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಆತನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರೂ ಆತ ಪತ್ತೆಯಾಗಿರಲಿಲ್ಲ.
ಸುಮಾರು 10 ದಿನಗಳ ನಂತರ, ಹತ್ತಿರದ ಗದ್ದೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಅನಾಥ ಶವವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಶವದ ಮೇಲಿದ್ದ ಬಟ್ಟೆಗಳನ್ನು ಆಧರಿಸಿ, ಅದು ತಮ್ಮ ಮಗ ಸನಾತನ ನಾಯಕ್‌ನದ್ದೇ ಶವ ಎಂದು ಕುಟುಂಬಸ್ಥರು ಭಾವಿಸಿದ್ದರು.ಬಳಿಕ ಶವವನ್ನು ಪಡೆದು ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರ ನೆರವೇರಿಸಿ, ಉತ್ತರಕ್ರಿಯೆ (ಶುದ್ಧಿಕ್ರಿಯೆ) ವಿಧಿವಿಧಾನಗಳನ್ನೂ ಪೂರ್ಣಗೊಳಿಸಿದ್ದರು.ಆತನ ಹೆಂಡತಿಯೂ ವಿಧವೆಯ ಆಚಾರ-ವಿಚಾರಗಳನ್ನು ಪಾಲಿಸಲು ಪ್ರಾರಂಭಿಸಿದ್ದರು.
ಘಟನೆ ನಡೆದು ಸುಮಾರು ಒಂದು ತಿಂಗಳ ನಂತರ, ಸನಾತನ ನಾಯಕ್ ಜೀವಂತವಾಗಿದ್ದಾನೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದರಿಂದ ಕುಟುಂಬಸ್ಥರು ಆಘಾತಕ್ಕೊಳಗಾದರು.ಕೂಡಲೇ ಆತನಿದ್ದ ಸ್ಥಳಕ್ಕೆ ತೆರಳಿದ ಸಂಬಂಧಿಕರು ಆತನನ್ನು ಮನೆಗೆ ಕರೆತಂದಿದ್ದಾರೆ.
ಮಗ ಮನೆಗೆ ಮರಳಿದ್ದರಿಂದ ಕುಟುಂಬದಲ್ಲಿ ಸಂತಸ ಮನೆಮಾಡಿದೆಯಾದರೂ, ‘ತಾವು ದಹನ ಮಾಡಿದ ಶವ ಯಾರದ್ದು?’ ಎಂಬ ಪ್ರಶ್ನೆಗೆ ಉತ್ತರ ಸಿಗದೆ ಕುಟುಂಬಸ್ಥರು ಹಾಗೂ ಸ್ಥಳೀಯ ಪೊಲೀಸರು ಗೊಂದಲಕ್ಕೊಳಗಾಗಿದ್ದಾರೆ.








