ಬೆಂಗಳೂರು : ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಕೇಸ್ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. 8 ತಿಂಗಳ ಹಿಂದೆ ಕಾಲೇಜ್ಗೆ ಹೋಗೋದಾಗಿ ಹೇಳಿ ನಾಪತ್ತೆ ಆಗಿದ್ದ ತನಿಷ್ಕಾ ಹಾಗೂ ತೇಜಸ್ವಿ ಇದೀಗ ಪತ್ತೆಯಾಗಿದ್ದಾರೆ.
8 ತಿಂಗಳ ಹಿಂದೆ ಇಬ್ಬರು ಮಿಸ್ಸಿಂಗ್
ಇದೇ ವರ್ಷ ಜನವರಿ 30ರಂದು ವಿದ್ಯಾರಣ್ಯಪುರದ ಇಬ್ಬರು ಯುವತಿಯರು ನಾಪತ್ತೆಯಾಗಿದ್ರು. ಸೆಕೆಂಡ್ ಪಿಯುಸಿ ಓದ್ತಿದ್ದ ತನಿಷ್ಕಾ ಹಾಗೂ ಫಸ್ಟ್ ಪಿಯುಸಿ ಓದ್ತಿದ್ದ ಅಪ್ರಾಪ್ತ ಯುವತಿ ತೇಜಸ್ವಿನಿ ಮನೆ ಬಿಟ್ಟು ಹೋಗಿದ್ರು. ಬಳಿಕ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಪೊಲೀಸರು ಪತ್ತೆ ಮಾಡಲು ಮುಂದಾಗಿದ್ದರು. ನಾಪತ್ತೆಯಾಗಿ ಆಗಿ ತಿಂಗಳುಗಳು ಕಳೆದ್ರೂ ಪೊಲೀಸರಿಗೆ ಯುವತಿಯರ ಸುಳಿವು ಸಿಕ್ಕಿರಲಿಲ್ಲ.
ಕೊನೆಗೂ ಸಿಕ್ಕಿಬಿದ್ದರು ಯುವತಿಯರು
ಈ ವೇಳೆ ತನಿಷ್ಕಾ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಹೈಕೋರ್ಟ್ ಪ್ರಕರಣವನ್ನ ಸಿಐಡಿಗೆ ವರ್ಗಾವಣೆ ಮಾಡಿತ್ತು. ಕಳೆದ ಮೂರು ತಿಂಗಳಿಂದ ಸಿಐಡಿ ಟೀಮ್ ಈ ಇಬ್ಬರು ಯುವತಿಯರಿಗಾಗಿ ಹುಡುಕಾಟ ನಡೆಸಿತ್ತು. ಕುಟುಂಬಸ್ಥರ ಹಾಗೂ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡ್ತಿದ್ದ ಯುವತಿಯರು ಕೊನೆಗೂ ಸಿಕ್ಕಿಬಿದ್ದಿದ್ದಾರೆ.
ಬೆಟ್ಟಕ್ಕೆ ಹೋದವರು ಬಳಿಕ ಏನಾದ್ರು?
ವಿದ್ಯಾರಣ್ಯಪುರ ಪೊಲೀಸರ ತನಿಖೆ ವೇಳೆ ಯುವತಿಯರು ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದು ಪತ್ತೆಯಾಗಿತ್ತು. ಅಲ್ಲಿಗೆ ತೆರಳಿ ಮಗು ಜೊತೆಗೆ ಆಟವಾಡಿದ್ದ ಇಬ್ಬರೂ ಒಂದು ಸೆಲ್ಫಿ ಫೋಟೋ ತೆಗೆದುಕೊಂಡಿದ್ದರು ಅಷ್ಟೇ. ಬಳಿಕ ಯುವತಿಯರ ಸುಳಿವೇ ಸಿಕ್ಕಿರಲಿಲ್ಲ. ಇದೀಗ ಸಿಐಡಿ ಆಫೀಸರ್ ಕೈಗೆ ಯುವತಿಯರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ಸಿಮ್ ಖರೀದಿಸಲು ಹೋಗಿ ಸಿಕ್ಕಿಬಿದ್ದರು
ಸಿಮ್ ಕಾರ್ಡ್ ಖರೀದಿ ಮಾಡಲು ಹೋಗಿದ್ದ ತನಿಷ್ಕಾ ಸಿಐಡಿ ಆಫೀಸರ್ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಿಕ್ಕಿಬಿದ್ದ ಯುವತಿಯರು 8 ತಿಂಗಳ ಕಥೆಯನ್ನ ಬಾಯ್ಬಿಟ್ಟಿದ್ದಾರೆ. ಮಲೈ ಮಹದೇಶ್ವರ ಬೆಟ್ಟದಲ್ಲಿ ಈ ಇಬ್ಬರು ಯುವತಿಯರಿಗೆ ಓರ್ವ ಯುವಕನ ಪರಿಚಯವಾಯ್ತಂತೆ. ಮನೆಯಲ್ಲಿನ ಒತ್ತಡದಿಂದ ಯುವಕನ ಬಳಿ ನಮಗೆ ಅಪ್ಪ-ಅಮ್ಮ ಇಲ್ಲ ಅಂತ ಸುಳ್ಳು ಹೇಳಿದ್ದರು ಎನ್ನಲಾಗ್ತಿದೆ.
ಮದುವೆಯೂ ಆಯ್ತು ಈಗ ಗರ್ಭಿಣಿ
ನಾನು ಹಾಗೂ ನನ್ನ ತಂಗಿ ಇಬ್ಬರೇ ಇದ್ದು, ನಮಗೆ ಅಪ್ಪ-ಅಮ್ಮ , ಕುಟುಂಬ ಯಾರೂ ಇಲ್ಲ ಎಂದಿದ್ದಾರೆ. ಬಳಿಕ ಆ ಯುವಕನ ಜೊತೆಗೆ ಇಬ್ಬರೂ ಹೋಗಿದ್ದರು. ಇಬ್ಬರು ಯುವತಿಯರಲ್ಲಿ ತನಿಷ್ಕಾ ಆ ಯುವಕನನ್ನೇ ಮದುವೆಯಾಗಿದ್ದು, ಒಟ್ಟಿಗೆ ಸಂಸಾರ ನಡೆಸಿಕೊಂಡಿದ್ದರು. ತಂಗಿ ಎಂದು ಹೇಳಿಕೊಂಡು ತೇಜಸ್ವಿನಿಯನ್ನು ಜೊತೆಗೆ ಇಟ್ಟುಕೊಂಡಿದ್ದಳು. ಯುವಕನನ್ನ ಮದುವೆಯಾಗಿದ್ದ ತನಿಷ್ಕಾ ಈಗ ಗರ್ಭಿಣಿ ಆಗಿದ್ದಾಳೆ.
ಆಧಾರ್ ಕಾರ್ಡ್ ನಂಬರ್ ಬಳಸಿ ಸಿಕ್ಕಿಬಿದ್ದಳು
ಆಧಾರ್ ಕಾರ್ಡ್ ನೀಡಿ ಸಿಮ್ ಖರೀದಿ ಮಾಡಲು ತನಿಷ್ಕಾ ಮುಂದಾಗಿದ್ದಳು. ಈ ವೇಳೆ ಸಿಐಡಿಗೆ ಆಧಾರ್ ಕಾರ್ಡ್ ನಂಬರ್ ಬಳಕೆ ಆಗಿರೋ ಬಗ್ಗೆ ಸರ್ವಿಸ್ ಪ್ರೊವೈಡರ್ ನಿಂದ ಮಾಹಿತಿ ಬಂದಿದೆ. ಮಾಹಿತಿ ಆಧರಿಸಿ ತೆರಳಿದ್ದ ಸಿಐಡಿ, ಪರಿಶೀಲನೆ ನಡೆಸಿದ ವೇಳೆ ಇಬ್ಬರೂ ಪತ್ತೆಯಾಗಿದ್ದಾರೆ. ಇಬ್ಬರನ್ನ ಕೂಡ ಇಂದು ಹೈಕೋರ್ಟ್ ಮುಂದೆ ಹಾಜರು ಪಡಿಸಲು ಸಿಐಡಿ ಮುಂದಾಗಿದೆ.








