ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವು ಸಂಭವಿಸಿ ವರ್ಷಗಳು ಕಳೆದರೂ ಆ ಪ್ರಕರಣದ ಸುತ್ತಲಿನ ರಹಸ್ಯಗಳು ಮಾತ್ರ ಇನ್ನೂ ಬಗೆಹರಿದಿಲ್ಲ. ಇತ್ತೀಚೆಗೆ ನಡೆದ ರಹಸ್ಯ ಕಾರ್ಯಾಚರಣೆಯೊಂದರಲ್ಲಿ, ಸುಶಾಂತ್ ಅವರ ಮರಣೋತ್ತರ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಅತ್ಯಂತ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದು, ಈ ಪ್ರಕರಣ ಮತ್ತೆ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.
ಖಾಸಗಿ ಸುದ್ದಿವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಮಾತನಾಡಿದ ಶವಪರೀಕ್ಷಾ ಸಿಬ್ಬಂದಿ ರೂಪಕುಮಾರ್ ಶಾ, ಸುಶಾಂತ್ ಅವರ ದೇಹದ ಮೇಲೆ ಕಂಡುಬಂದ ಗುರುತುಗಳು ಆತ್ಮಹತ್ಯೆಯ ಲಕ್ಷಣಗಳಾಗಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರೂಪಕುಮಾರ್ ಅವರ ಹೇಳಿಕೆಯ ಪ್ರಕಾರ, ನಟನ ಕಣ್ಣುಗಳಿಗೆ ತೀವ್ರವಾದ ಗಾಯಗಳಾಗಿದ್ದವು. ಯಾರೂ ತಮ್ಮ ಕಣ್ಣುಗಳನ್ನು ತಾವೇ ಚುಚ್ಚಿಕೊಳ್ಳಲು ಸಾಧ್ಯವಿಲ್ಲ. ನಟನನ್ನು ನೇಣಿಗೆ ಹಾಕುವ ಮುನ್ನ ಎರಡು ಮೂರು ಬಾರಿ ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಲಾಗಿತ್ತು. ಅಲ್ಲದೆ ಅವರ ಕುತ್ತಿಗೆಯ ಎಡಭಾಗದಲ್ಲಿ ವಿದ್ಯುತ್ ಪ್ರವಹಿಸುವ ಸಾಧನದಿಂದ ಮೂರ್ನಾಲ್ಕು ಬಾರಿ ಶಾಕ್ ನೀಡಲಾಗಿತ್ತು, ಇದರಿಂದಾಗಿ ಚರ್ಮದ ಮೇಲೆ ಆಳವಾದ ಗಾಯಗಳಾಗಿದ್ದವು. ಶವಪರೀಕ್ಷೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡದೆ ಕೇವಲ ಛಾಯಾಚಿತ್ರಗಳನ್ನು ಮಾತ್ರ ತೆಗೆಯಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಅಂದಿನ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರು ಮರಣೋತ್ತರ ಪರೀಕ್ಷೆಯನ್ನು ಮರುದಿನ ಬೆಳಗ್ಗೆ ಮಾಡೋಣ ಎಂದರೂ ಕೇಳದೆ, ಅದೇ ರಾತ್ರಿ ತುರ್ತಾಗಿ ಮುಗಿಸುವಂತೆ ತಮ್ಮ ಮೇಲೆ ಭಾರಿ ಒತ್ತಡ ಹೇರಿದ್ದರು ಎಂದು ರೂಪಕುಮಾರ್ ದೂರಿದ್ದಾರೆ. ಅಷ್ಟೇ ಅಲ್ಲದೆ, ನಂತರದ ದಿನಗಳಲ್ಲಿ ತಮ್ಮನ್ನು ಹದಿನೈದು ದಿನಗಳ ಕಾಲ ಅಕ್ರಮವಾಗಿ ಕೂಡಿ ಟೈರ್ ಒಳಗೆ ಹಾಕಿ ಹಿಗ್ಗಾಮುಗ್ಗಾ ಥಳಿಸಿ ಚಿತ್ರಹಿಂಸೆ ನೀಡಲಾಗಿತ್ತು ಹಾಗೂ ಮುಖವಾಡ ಧರಿಸಿದ ಅಪರಿಚಿತರು ಬಂದು ಜೀವಬೆದರಿಕೆ ಹಾಕಿದ್ದರು ಎಂದೂ ಅವರು ಹೇಳಿದ್ದಾರೆ.
ಸುಶಾಂತ್ ಸಾವಿಗೂ ಒಂದು ವಾರದ ಮುನ್ನ ಮೃತಪಟ್ಟ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯಾನ್ ಸಾವಿನ ಬಗ್ಗೆಯೂ ರೂಪಕುಮಾರ್ ಮಾತನಾಡಿದ್ದಾರೆ. ದಿಶಾ ಅವರ ಶವಪರೀಕ್ಷೆ ನಡೆಸಿದ ಮತ್ತೊಬ್ಬ ಸಿಬ್ಬಂದಿಯ ಪ್ರಕಾರ, ಆಕೆಯ ತುಟಿ, ಕಿವಿ ಮತ್ತು ಎದೆಯ ಭಾಗದಲ್ಲಿ ತೀವ್ರವಾದ ಗಾಯ ಹಾಗೂ ಕಡಿತದ ಗುರುತುಗಳಿದ್ದವು. ಆಕೆಯ ಮೇಲೆ ಸಾಮೂಹಿಕ ದೌರ್ಜನ್ಯ ನಡೆದ ಅನುಮಾನವಿತ್ತು ಎಂದು ತಮ್ಮ ಸಹೋದ್ಯೋಗಿ ತಿಳಿಸಿದ್ದಾಗಿ ರೂಪಕುಮಾರ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಾಂಬೆ ಹೈಕೋರ್ಟ್ ದಿಶಾ ಸಾಲಿಯಾನ್ ಪ್ರಕರಣದ ತನಿಖೆಗೆ ಆದೇಶಿಸಿದ್ದು, ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸೇರಿದಂತೆ ಇಡೀ ಕುಟುಂಬದಲ್ಲಿ ನ್ಯಾಯದ ಭರವಸೆ ಮೂಡಿದೆ. ಇತ್ತ ದಿಶಾ ಅವರ ತಂದೆ ಸತೀಶ್ ಕೂಡ ಮಾತನಾಡಿದ್ದು, ಸುಶಾಂತ್ ಹಾಗೂ ದಿಶಾ ಸಾವುಗಳ ನಡುವೆ ನೂರಕ್ಕೆ ನೂರು ನಂಟಿದೆ ಎಂದು ಪುನರುಚ್ಚರಿಸಿದ್ದಾರೆ. ಕೇಂದ್ರ ತನಿಖಾ ದಳ ನೀಡಿದ್ದ ಆತ್ಮಹತ್ಯೆಯ ವರದಿ ತಪ್ಪಾಗಿದ್ದು, ಎರಡೂ ಪ್ರಕರಣಗಳ ಮರುತನಿಖೆ ನಡೆದು ಅಸಲಿ ಸತ್ಯ ಹೊರಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ.








