ಮಂಡ್ಯ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೊಲೆ ಮಾಡಿದ್ದ ಅಪರಾಧಿ ಪಾಂಡವಪುರದ ಪ್ರಕಾಶ ಬಿನ್ ಮುದ್ದೇಗೌಡ ಎಂಬಾತನಿಗೆ ನಗರದ 2ನೇ ತ್ವರಿತಗತಿ ನ್ಯಾಯಾಲಯವು ಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು ₹2 ಲಕ್ಷ ದಂಡ ವಿಧಿಸಿ ಆದೇಶಿಸಿದೆ.
ಕೆ.ಆರ್. ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಶಾಲೆಯೊಂದರ ಬಾಲಕಿಯನ್ನು ಸಂಜೆ 4.30ರ ವೇಳೆಯಲ್ಲಿ ಹಣ ಕೊಡುತ್ತೇನೆ ಎಂದು ಪುಸಲಾಯಿಸಿ ಶಾಲಾ ಕೊಠಡಿಯೊಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ.
ನಂತರ ಆಕೆಯ ತಲೆಯನ್ನು ಹಿಡಿದು ಜೋರಾಗಿ ನೆಲಕ್ಕೆ ಅಪ್ಪಳಿಸಿದಾಗ ಬಾಲಕಿಯ ಬಾಯಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿತ್ತು. ನಂತರ ಬಾಲಕಿಯ ಕುತ್ತಿಗೆಗೆ ದಾರ ಬಿಗಿದು ಕೊಲೆ ಮಾಡಿದ್ದ.
ಈ ಬಗ್ಗೆ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ 2015ರಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ರಾಜೇಂದ್ರ ಮತ್ತು ಡಿ.ಯೋಗೇಶ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ದಿಲೀಪ್ ಕುಮಾರ್ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.








