ಮಂಗಳೂರು: ಮನೆ ಕೆಲಸದವರ ಕಳವು ಪ್ರಕರಣದಲ್ಲಿ ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿತೆಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತೆಯನ್ನು ಲತಾ ಮಾರಿಯಾ (44) ಎಂದು ಗುರುತಿಸಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ಅ.ಕ್ರ. 33/2019, ಐಪಿಸಿ ಕಲಂ 381ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಹಿರಿಯ ಸಿಜೆ ಮತ್ತು ಸಿಜೆಎಂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ ಲತಾ ಮಾರಿಯಾ ವಿರುದ್ಧ LPC ವಾರಂಟ್ (LPC No. 05/2024)ಹೊರಡಿಸಲಾಗಿತ್ತು. ಬಳಿಕವೂ ಅವರು ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಕಾವೂರು ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ, ಜ್ಯೋತಿ ನಗರದಲ್ಲಿ ಲತಾ ಮಾರಿಯಾರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿತೆಯನ್ನು ಇಂದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.








