ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಹಾಗೂ ಸತ್ಯವನ್ನು ತಂದೆಗೆ ತಿಳಿಸುತ್ತಾನೆ ಎಂಬ ಒಂದೇ ಕಾರಣಕ್ಕೆ, ಹೆತ್ತ ತಾಯಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ 14 ವರ್ಷದ ಕನ್ನ ಮಗನನ್ನೇ ಕೊಲೆ ಮಾಡಿರುವ ಕರುಳು ಹಿಂಡುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮಹಾರಾಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿಪೌಸಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು 8ನೇ ತರಗತಿಯಲ್ಲಿ ಓದುತ್ತಿದ್ದ ಸತ್ಯಮ್ (14) ಎಂದು ಗುರುತಿಸಲಾಗಿದೆ.ಬಾಲಕನ ತಂದೆ ಗುಜರಾತ್‌ನಲ್ಲಿ ಉದ್ಯೋಗದಲ್ಲಿದ್ದು, ಮನೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳಿದ್ದರು.ತಾಯಿಗೆ ನೆರೆಮನೆಯ ಯುವಕನೊಂದಿಗೆ ಅಕ್ರಮ ಸಂಬಂಧವಿತ್ತು.
ಸಂಜೆ ವೇಳೆ ಬಾಲಕ ಮನೆಗೆ ಬಂದಾಗ ತಾಯಿ ಹಾಗೂ ಆಕೆಯ ಪ್ರಿಯಕರ ಅಪವಿತ್ರ ಸ್ಥಿತಿಯಲ್ಲಿರುವುದನ್ನು ಕಣ್ಣಾರೆ ಕಂಡಿದ್ದಾನೆ.ಈ ಅಸಹ್ಯ ಕೃತ್ಯವನ್ನು ದೂರವಾಣಿ ಮೂಲಕ ತಂದೆಗೆ ತಿಳಿಸುವುದಾಗಿ ಹಾಗೂ ಊರಿನವರಿಗೆ ಹೇಳುವುದಾಗಿ ಎಚ್ಚರಿಸಿದ್ದಾನೆ.ಇದರಿಂದ ತಮ್ಮ ರಹಸ್ಯ ಎಲ್ಲಿ ಬಂಪರ್ ಆಗಿ ಬಯಲಾಗುವುದೋ ಎಂಬ ಭಯದಿಂದ ತಾಯಿ ಹಾಗೂ ಪ್ರಿಯಕರ ಸೇರಿ ಬಾಲಕನ ಕಾಲು-ಕೈಗಳನ್ನು ಹಿಡಿದುಕೊಂಡು ಕ್ರೂರವಾಗಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ.
ಹತ್ಯೆಯ ನಂತರ, ಮಗನಿಗೆ ದಿಢೀರನೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡು ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ ಎಂದು ಊರಿನವರಿಗೆ ಹಾಗೂ ಸಂಬಂಧಿಕರಿಗೆ ನಂಬಿಸಲು ತಾಯಿ ಯತ್ನಿಸಿದ್ದಾಳೆ. ಆದರೆ, ಬಾಲಕನ ಸಾವು ಮತ್ತು ತಾಯಿಯ ನಡವಳಿಕೆ ಸ್ಥಳೀಯರಲ್ಲಿ ತೀವ್ರ ಅನುಮಾನ ಮೂಡಿಸಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಮಹಾರಾಜ್‌ಪುರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಮೃತದೇಹವನ್ನು ತಪಾಸಣೆ ನಡೆಸಿದಾಗ ಬಾಲಕನ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕ ಅನಾರೋಗ್ಯದಿಂದ ಮೃತಪಟ್ಟಿಲ್ಲ, ಬದಲಿಗೆ ಕುತ್ತಿಗೆ ಹಿಸುಕಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂಬುದು ದೃಢಪಟ್ಟಿದೆ.








