ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹80 ಸಾವಿರ ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-2 ಆದೇಶಿಸಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 2025ರಲ್ಲಿ ಪ್ರಕರಣ ಸಂಖ್ಯೆ 141/2025ರಂತೆ ಪೋಕ್ಸೋ ಕಾಯ್ದೆ-2012 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)-2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಬಂಟ್ವಾಳ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರು ನಡೆಸಿದ್ದರು. ತನಿಖೆಯ ವೇಳೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ, ಬೆಳ್ತಂಗಡಿ ಗುರುವಾಯನಕೆರೆ ನಿವಾಸಿ ಅಬ್ದುಲ್ ಲತಿಫ್ ಹಾಗೂ ಇತರೆ ಇಬ್ಬರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-2ರಲ್ಲಿ ನಡೆಯಿತು. ವಿಚಾರಣೆಯ ವೇಳೆ ಅಬ್ದುಲ್ ಲತಿಫ್ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಸೆಪ್ಟೆಂಬರ್ 19, 2026ರಂದು ಮಾನ್ಯ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಅಬ್ದುಲ್ ಲತಿಫ್‌ಗೆ 20 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ ₹80,000 ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಅವರು ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.








