ವಯನಾಡ್: ಸುವರ್ಣ ಕೇರಳಂ ಬಂಪರ್ ಲಾಟರಿಯಲ್ಲಿ ₹1 ಕೋಟಿ ಪ್ರಥಮ ಬಹುಮಾನ ಗೆದ್ದಿರುವ ಅದೃಷ್ಟಶಾಲಿ ಗ್ರಾಹಕನಿಗಾಗಿ ವಯನಾಡ್ ಜಿಲ್ಲೆಯ ಕಲ್ಪೆಟ್ಟದ ಲಾಟರಿ ವ್ಯಾಪಾರಿಯೊಬ್ಬರು ಕಾತರದಿಂದ ಕಾಯುತ್ತಿದ್ದಾರೆ. ಕಲ್ಪೆಟ್ಟ ಸೇವಾ ಸಹಕಾರಿ ಬ್ಯಾಂಕ್ ಬಳಿ ಲಾಟರಿ ಕೌಂಟರ್ ನಡೆಸುತ್ತಿರುವ ಕೊಟ್ಟವಯಲ್ ಮೂಲದ ಅಜಯಕುಮಾರ್ ಎಂಬುವರ ಕೌಂಟರ್ನಲ್ಲಿ ಸೆಪ್ಟೆಂಬರ್ 18 ರಂದು ಡ್ರಾ ಆದ ಈ ಜ್ಯಾಕ್ಪಾಟ್ ಟಿಕೆಟ್ ಮಾರಾಟವಾಗಿದೆ.
ಕೇರಳ ಲಾಟರಿ ಇಲಾಖೆಯ ನಿಯಮಾವಳಿ ಪ್ರಕಾರ ₹1 ಕೋಟಿ ಬಂಪರ್ ಬಹುಮಾನ ಗೆದ್ದ ಟಿಕೆಟ್ ಮಾರಾಟ ಮಾಡಿದ ಏಜೆಂಟ್ಗೆ ₹12 ಲಕ್ಷ ಕಮಿಷನ್ ಸಿಗಲಿದೆ. ಬಡತನದಲ್ಲಿದ್ದರೂ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಕನಸು ಕಾಣುತ್ತಿದ್ದ ಅಜಯಕುಮಾರ್ ಅವರಿಗೆ ಈ ಕಮಿಷನ್ ಹಣ ಭಾರಿ ಆಸರೆಯಾಗಲಿದೆ. ಈ ಹಿಂದೆ ತಮ್ಮ ಕೌಂಟರ್ನಲ್ಲಿ ಮಾರಾಟವಾದ ಟಿಕೆಟ್ಗಳಿಗೆ ಗರಿಷ್ಠ ₹5 ಲಕ್ಷ ಬಹುಮಾನ ಬಂದಿತ್ತು. ಇದೇ ಮೊದಲ ಬಾರಿಗೆ ಕೋಟಿ ರೂಪಾಯಿ ಬಹುಮಾನದ ಟಿಕೆಟ್ ಮಾರಾಟವಾಗಿರುವುದು ಅಜಯಕುಮಾರ್ ಅವರ ಸಂತಸವನ್ನು ಇಮ್ಮಡಿಗೊಳಿಸಿದೆ.
ಟಿಕೆಟ್ ಬಂಪರ್ ಹೊಡೆದಿರುವುದು ತಿಳಿಯುತ್ತಿದ್ದಂತೆಯೇ ಅಜಯಕುಮಾರ್ ಕೌಂಟರ್ ಮುಂದೆ ದೊಡ್ಡ ಫ್ಲೆಕ್ಸ್ ಬ್ಯಾನರ್ ಹಾಕಿ, ಸಾರ್ವಜನಿಕರಿಗೆ ಲಡ್ಡು ವಿತರಿಸಿದ್ದಾರೆ. ಸಹಾಯಕ ಆರುಮುಖನ್ ಅವರೊಂದಿಗೆ ಸೇರಿ ಧ್ವನಿವರ್ಧಕ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ವಿಜೇತರ ಪತ್ತೆಗೆ ಶ್ರಮಿಸುತ್ತಿದ್ದಾರೆ. ಆದರೆ, ಡ್ರಾ ಮುಗಿದು ಮೂರು ದಿನಗಳಾಗಿದ್ದರೂ ಅದೃಷ್ಟಶಾಲಿ ಗ್ರಾಹಕ ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ. “ಟಿಕೆಟ್ ಖಂಡಿತವಾಗಿಯೂ ನನ್ನ ಕೌಂಟರ್ನಲ್ಲಿ ಮಾರಾಟವಾಗಿದೆ. ವಿಜೇತರು ಬಂದು ಬ್ಯಾಂಕ್ಗೆ ಟಿಕೆಟ್ ಸಲ್ಲಿಸಿದರೆ ಮಾತ್ರ ನನಗೆ ಕಮಿಷನ್ ಸಿಗಲಿದೆ, ಆ ಬಳಿಕವಷ್ಟೇ ಮಗಳ ಮದುವೆಯ ಯೋಜನೆ ರೂಪಿಸಲು ಸಾಧ್ಯ” ಎಂದು ಅಜಯಕುಮಾರ್ ಹೇಳಿದ್ದಾರೆ.
ಸಗಟು ಲಾಟರಿ ಏಜೆಂಟ್ ಎ. ಅಮಿತೇಶ್ ನೀಡಿರುವ ಮಾಹಿತಿ ಪ್ರಕಾರ, ಇತ್ತೀಚಿನ ಲಾಟರಿ ನಿಯಮಾವಳಿಗಳ ಬದಲಾವಣೆಯಂತೆ ವಿಜೇತರು ಬಹುಮಾನ ಪಡೆಯಲು ಮುಂದೆ ಬರದಿದ್ದರೂ ಸಹ, ಟಿಕೆಟ್ ಮಾರಾಟ ಮಾಡಿದ ಏಜೆಂಟ್ಗೆ ಕಮಿಷನ್ ಸಿಗಲಿದೆ. ಸಗಟು ಏಜೆಂಟ್ ಪಾಲು ಕಡಿತಗೊಂಡ ನಂತರ ಅಜಯಕುಮಾರ್ ಅವರಿಗೆ ಅಂದಾಜು ₹8.55 ಲಕ್ಷ ಕೈಸೇರಲಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 115BB ಪ್ರಕಾರ ಲಾಟರಿ ಗೆಲುವಿನ ಮೇಲೆ ಶೇ. 30ರಷ್ಟು ನೇರ ತೆರಿಗೆ, ಸರ್ಚಾರ್ಜ್ ಹಾಗೂ ಶೇ. 4ರಷ್ಟು ಆರೋಗ್ಯ ಮತ್ತು ಶಿಕ್ಷಣ ಸೆಸ್ ಒಳಗೊಂಡಂತೆ ಒಟ್ಟು ₹34.32 ಲಕ್ಷ ತೆರಿಗೆ ಕಡಿತಗೊಳ್ಳಲಿದೆ. ಅಂತಿಮವಾಗಿ ಅದೃಷ್ಟಶಾಲಿ ವಿಜೇತನಿಗೆ ಅಂದಾಜು ₹65.68 ಲಕ್ಷ ನಿವ್ವಳ ಮೊತ್ತ ಸಿಗಲಿದೆ.








