ಮಂಗಳೂರು: ಕಾಲೇಜು ಆವರಣದಲ್ಲಿ ಸೀನಿಯರ್ ವಿದ್ಯಾರ್ಥಿಗಳಿಂದ ಕಿರುಕುಳ ಹಾಗೂ ಜೀವ ಬೆದರಿಕೆ ಎದುರಿಸಿದ್ದಾಗಿ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬರು ದೂರು ನೀಡಿದ್ದಾರೆ. ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆಯೆನ್ನಲಾದ ಈ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ನಿವಾಸಿ, ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಬಿ.ಎಸ್ಸಿ ಇನ್ ನ್ಯೂರೋ ಸೈನ್ಸ್ ಟೆಕ್ನಾಲಜಿ ಓದುತ್ತಿರುವ 21 ವರ್ಷದ ಅಕ್ಷಯ್ ವಿ.ಎಸ್. ಹಾಗೂ ಅವರ ಸ್ನೇಹಿತರಿಗೆ ಸೀನಿಯರ್ ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಕ್ಟೋಬರ್ 2ರಂದು ಅಕ್ಷಯ್ ದೇರಳಕಟ್ಟೆಯ ರೆಸ್ಟೋರೆಂಟ್ ಬಳಿ ನಿಂತಿದ್ದಾಗ ಸೀನಿಯರ್ ವಿದ್ಯಾರ್ಥಿಗಳಾದ ಅಶಾದ್ ಮತ್ತು ಅಸ್ಪಕ್ ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಅಸ್ಪಕ್, ಕ್ಯಾಂಪಸ್ ಹೊರಗೆ ಸಮವಸ್ತ್ರವಿಲ್ಲದೆ ತಿರುಗಾಡಿದರೆ ಕೈಕಾಲು ಮುರಿದು ಕಾಲೇಜಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಅಕ್ಟೋಬರ್ 15ರಂದು ಅಕ್ಷಯ್ ಮತ್ತು ಅವರ ಸ್ನೇಹಿತರು ಊಟಕ್ಕೆಂದು ಕಾಲೇಜಿನ ಎದುರಿನ ಹೋಟೆಲ್‌ಗೆ ತೆರಳಿದ್ದಾಗ, ಅಶಾದ್ ಝಾಹಿದ್ ಎಂಬ ವಿದ್ಯಾರ್ಥಿಗೆ ಕರೆ ಮಾಡಿ ಎಲ್ಲರನ್ನೂ ದೇರಳಕಟ್ಟೆಯ ಕ್ಲಾಕ್ ಟವರ್ ಬಳಿ ಬರುವಂತೆ ಹೇಳಿದ್ದಾನೆ ಎನ್ನಲಾಗಿದೆ. ಬಳಿಕ ವಿದ್ಯಾರ್ಥಿಗಳನ್ನು ದೇವಿಪ್ರಸಾದ್ ಹೋಟೆಲ್‌ನ ಕೊಠಡಿಯಲ್ಲಿ ಕೂಡಿ ಹಾಕಿ ಬಲವಂತವಾಗಿ ಹಾಡು ಹಾಡಿಸಿ, ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಇತರರಿಗೆ ಹಂಚಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 22ರಂದು ಅಶಾದ್ ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ಬೈಕ್‌ನಲ್ಲಿ ಬಂದು ಅಕ್ಷಯ್ ಸ್ನೇಹಿತ ಅಲ್ಪಾಜ್‌ನನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಬಳಿಕ ಬೆಂಕಿಪೊಟ್ಟಣ ನೀಡಿ ಕೋಣೆಯ ಅಳತೆ ಮಾಡುವಂತೆ ಹೇಳುವುದು ಹಾಗೂ ಕೋಳಿ ಮೊಟ್ಟೆ ಇಡುವ ರೀತಿಯನ್ನು ಅನುಕರಿಸುವಂತೆ ಒತ್ತಾಯಿಸುವುದು ಸೇರಿದಂತೆ ರ‍್ಯಾಗಿಂಗ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೈಕಾಲು ಮುರಿದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯಿಂದ ಭಯಗೊಂಡ ಅಕ್ಷಯ್ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಶಾದ್, ಅಸ್ಪಕ್ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನ ಆಧಾರದಲ್ಲಿ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.








