ಮಂಗಳೂರು: ಮನೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಕೊಡಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿರುವ ಘಟನೆ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕೀರ್ ಸೇರಿದಂತೆ ನಾಲ್ವರ ವಿರುದ್ಧ ದೂರು ಸಲ್ಲಿಸಲಾಗಿದೆ.
ಈಸಾರೋಶನ್ ಅಲಿಯಾಸ್ ರೋಶನ್ ಹಲ್ಲೆಗೊಳಗಾದವರು. ಸುಮಾರು ಎರಡು ತಿಂಗಳ ಹಿಂದೆ ಕಲ್ಲಾಪು ಮೂಲದ ಶಾಕೀರ್ ಅವರಿಗೆ ಪಾಂಡೇಶ್ವರ ಸಮೀಪದಲ್ಲಿರುವ ಫೈರೋಜ್ ಎಂಬವರಿಗೆ ಸೇರಿದ ಅಂಗಡಿಯನ್ನು ಬಾಡಿಗೆಗೆ ಕೊಡಿಸುವಲ್ಲಿ ರೋಶನ್ ಮಧ್ಯಸ್ಥಿಕೆ ವಹಿಸಿದ್ದರು. ಬಳಿಕ ಶಾಕೀರ್ ಆ ಮಳಿಗೆಯಲ್ಲಿ ಟೈಲ್ಸ್ಗಳನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಅಕ್ಟೋಬರ್ 25ರ ಮಧ್ಯಾಹ್ನ ಶಾಕೀರ್ ಅವರು ರೋಶನ್ಗೆ ದೂರವಾಣಿ ಕರೆ ಮಾಡಿ, ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಬಳಿಯ ಬಸ್ ನಿಲ್ದಾಣಕ್ಕೆ ಬರುವಂತೆ ಸೂಚಿಸಿದ್ದರು. ಅಲ್ಲಿಗೆ ರೋಶನ್ ಬಂದಾಗ ಶಾಕೀರ್ ಮತ್ತೊಬ್ಬ ವ್ಯಕ್ತಿಯೊಂದಿಗೆ ರಿಕ್ಷಾದಲ್ಲಿ ಆಗಮಿಸಿದ್ದರು. ನಂತರ ರೋಶನ್ ಅವರನ್ನು ಬಲವಂತವಾಗಿ ರಿಕ್ಷಾದಲ್ಲಿ ಕೂರಿಸಿ, ಪಾಂಡೇಶ್ವರದ ಫಾರಂ ಮಾಲ್ ಸಮೀಪದ ಅಂಗಡಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅಂಗಡಿಯಲ್ಲಿದ್ದ ಟೈಲ್ಸ್ಗಳು ನಾಪತ್ತೆಯಾಗಿರುವುದನ್ನು ಮುಂದಿಟ್ಟುಕೊಂಡು ಆರೋಪಿಗಳು ರೋಶನ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ. ಟೈಲ್ಸ್ಗಳನ್ನು ಅವರೇ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ, ಅವುಗಳನ್ನು ಎಲ್ಲಿ ಮಾರಾಟ ಮಾಡಲಾಗಿದೆ ಎಂಬುದನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ರೋಶನ್ ಅವರ ಕೆನ್ನೆಗೆ ಹೊಡೆದಿದ್ದು, ಟೈಲ್ಸ್ಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲವೆಂದು ತಿಳಿಸಿದರೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರ ರೋಶನ್ ಅವರನ್ನು ರಿಕ್ಷಾದಲ್ಲಿ ಬಜಾಲ್ ಸಮೀಪದ ನಿರ್ಜನ ಸ್ಥಳವೊಂದಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಶಾಕೀರ್ ತಮ್ಮ ಪರಿಚಯದ ಇನ್ನಿಬ್ಬರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ನಾಲ್ವರೂ ಸೇರಿ ಮರದ ದೊಣ್ಣೆಯಿಂದ ರೋಶನ್ ಮೇಲೆ ಹಲ್ಲೆ ನಡೆಸಿ, ಟೈಲ್ಸ್ಗಳ ಸುಳಿವು ನೀಡದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಷ್ಟಕ್ಕೇ ನಿಲ್ಲದೆ, ಆರೋಪಿಗಳು ರೋಶನ್ ಅವರನ್ನು ದೇರಳಕಟ್ಟೆ ಹಾಗೂ ಕಣ್ಣೂರು ಭಾಗದ ನಿರ್ಜನ ಪ್ರದೇಶಗಳಿಗೂ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತದನಂತರ ಬಜಾಲ್ ಬಳಿಯ ನಿರ್ಜನ ಸ್ಥಳದಲ್ಲೇ ಇರಿಸಿಕೊಂಡು ಅಕ್ಟೋಬರ್ 26ರ ಬೆಳಗಿನವರೆಗೂ ಹೊರಗೆ ಹೋಗಲು ಅವಕಾಶ ನೀಡದೆ ತಡೆದಿಟ್ಟಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ಅಕ್ಟೋಬರ್ 26ರ ಬೆಳಗ್ಗೆ ರೋಶನ್ ಅವರನ್ನು ಬೈಕ್ನಲ್ಲಿ ಜಪ್ಪಿನಮೊಗರು ದ್ವಾರದ ಬಳಿಗೆ ಕರೆತಂದು, ಅಲ್ಲಿಂದ ರಿಕ್ಷಾದಲ್ಲಿ ಕೂರಿಸಲು ಆರೋಪಿಗಳು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಅವರಿಂದ ತಪ್ಪಿಸಿಕೊಳ್ಳುವಲ್ಲಿ ರೋಶನ್ ಯಶಸ್ವಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ರೋಶನ್ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಶಾಕೀರ್, ಶಂಶು, ರಿಯಾಜ್ ಹಾಗೂ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.








