ಮಂಗಳೂರು: ನಗರದ ಪಾಂಡೇಶ್ವರದ ಶ್ರೀನಿವಾಸ ಕಾಲೇಜು ಎದುರಿನ ರೈಲ್ವೆ ಟ್ರ್ಯಾಕ್ ಸಮೀಪವಿರುವ ಮಿಜಾರ್ ಅಪಾರ್ಟ್‌ಮೆಂಟ್‌ನಲ್ಲಿ ತಡರಾತ್ರಿ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಅಸ್ಸೋಂ ಮೂಲದ 33 ವರ್ಷದ ಕೇಶವ್ ಎಂಬ ಯುವಕನನ್ನು ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸೋಮವಾರ ನಸುಕಿನ ಜಾವ ಸುಮಾರು 2 ಗಂಟೆಯ ವೇಳೆಗೆ ಮಿಜಾರ್ ಅಪಾರ್ಟ್‌ಮೆಂಟ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಲಿಫ್ಟ್ ತಾಂತ್ರಿಕ ದೋಷದಿಂದ ಏಕಾಏಕಿ ಸ್ಥಗಿತಗೊಂಡಿದ್ದು, ಕೇಶವ್ ಒಳಗೆ ಸಿಲುಕಿಕೊಂಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಹಳೆಯ ಮಾದರಿಯ ಲಿಫ್ಟ್ ಆಗಿದ್ದರಿಂದ ಕೀ ಮೂಲಕ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಬಳಿಕ ಹೈಡ್ರಾಲಿಕ್ ಸ್ಪ್ರೆಡರ್ ಉಪಕರಣ ಬಳಸಿ ಲಿಫ್ಟ್‌ನ ಬಾಗಿಲು ತೆರೆದು, ಒಳಗೆ ಸಿಲುಕಿದ್ದ ಯುವಕನನ್ನು ಯಾವುದೇ ಅಪಾಯವಿಲ್ಲದೆ ಹೊರಗೆ ಕರೆತರಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಹರೀಶ್ಚಂದ್ರ, ಲೀಡಿಂಗ್ ಫೈರ್‌ಮ್ಯಾನ್ ಚಂದ್ರ, ಚಾಲಕ ಕಿರಣ್ ಹಾಗೂ ಸಿಬ್ಬಂದಿಗಳಾದ ರಮೇಶ್ ಮತ್ತು ಲಾಲ್ ಅಹಮದ್ ಭಾಗವಹಿಸಿದ್ದರು. ಠಾಣಾಧಿಕಾರಿ ಪ್ರವೀಣ್ ಕೆ.ಎನ್. ಅವರು ಲಿಫ್ಟ್ ಹಳೆಯದಾಗಿದ್ದ ಕಾರಣ ಹೈಡ್ರಾಲಿಕ್ ಸ್ಪ್ರೆಡರ್ ಬಳಸಿ ಬಾಗಿಲು ತೆರೆಯಲಾಯಿತು ಎಂದು ತಿಳಿಸಿದ್ದಾರೆ.








