ಉಡುಪಿ: ವಿಟ್ಲಪಿಂಡಿ ಉತ್ಸವದ ವೇಳೆ ಅವಘಡವೊಂದು ನಡೆದಿದೆ. ಶ್ರೀಕೃಷ್ಣನ ಮಣ್ಣಿನ ಮೂರ್ತಿಯು ಕೆಳಗೆ ಬಿದ್ದಿದೆ. ರಥೋತ್ಸವ ಮುಗಿದ ಬಳಿಕ ಪರ್ಯಾಯ ಶ್ರೀಗಳಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅವರು ಕೃಷ್ಣನ ಮಣ್ಣಿನ ಮೂರ್ತಿಯನ್ನ ಮಧ್ವ ಸರೋವರಕ್ಕೆ ಕೊಂಡೊಯ್ಯುತ್ತಿದ್ದರು.
ಈ ವೇಳೆ ಹೀಗೊಂದು ಅವಘಡ ಆಗಿದೆ. ಅವರ ಕೈ ಜಾರಿ ಬಿದ್ದಿದ್ದು, ಅಪಚಾರ ಎಂಬಂತಾಗಿದೆ..
ರಥೋತ್ಸವ ನಂತರ ಕೃಷ್ಣನ ಮೃಣ್ಮಯ ಮೂರ್ತಿಯನ್ನ ರಥದಿಂದ ಕೆಳಗೆ ಇಳಿಸಿ, ಮಧ್ವ ಸರೋವರಕ್ಕೆ ಕೊಂಡೊಯ್ಯಬೇಕಾಗಿತ್ತು. ಅದರೆ ರಥದಿಂದ ಇಳಿಸುವಾಗಲೇ ಕೈಜಾರಿ ಬಿದ್ದಿದೆ. ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನ ಪೂಜಿಸಲಾಗುತ್ತದೆ. ಆದರೆ ಇಂದಿನ ಪೂಜೆ ಸಂದರ್ಭದಲ್ಲಿ ಅವಘಡ ಆಗಿದೆ.
ಜಾರಿ ಬಿದ್ದ ಮಣ್ಣಿನ ಮೂರ್ತಿ
ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಟ್ಲಪಿಂಡಿಯಲ್ಲಿ ಉತ್ಸವ ಅದ್ಧೂರಿಯಾಗಿ ನಡೆಯಿತು. ರಥೋತ್ಸವವೂ ಸಂಭ್ರಮದಿಂದ ಜರುಗಿತು. ರಥೋತ್ಸವದ ಬಳಿಕ ಮಣ್ಣಿನ ಮೂರ್ತಿಯನ್ನ ಮಧ್ವ ಸರೋವರದಲ್ಲಿ ವಿಸರ್ಜಿಸಬೇಕಾಗಿತ್ತು. ಹೀಗೆ ವಿಸರ್ಜನೆಗೆ ಕೊಂಡೊಯ್ಯಬೇಕು ಎಂದು ಕೆಳಗೆ ಇಳಿಸುವಾಗ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಕೈಯಿಂದಲೇ ಜಾರಿ ಬಿದ್ದಿದೆ. ಇನ್ನೇನು ಕೆಲವೇ ಕ್ಷಣದಲ್ಲಿ ವಿಸರ್ಜನೆ ಆಗಬೇಕಿತ್ತು. ಅಷ್ಟರೊಳಗೆ ಅವಘಡ ಆಗಿದೆ..
2 ದಿನಗಳ ಅದ್ಧೂರಿ ಕಾರ್ಯಕ್ರಮ
ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀಕೃಷ್ಣ ಲೀಲೋತ್ಸವ ಅಥವಾ ವಿಟ್ಲಪಿಂಡಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಶನಿವಾರ ಸಂಪನ್ನವಾಗಿದೆ. ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅತ್ಯಂತ ಮುಖ್ಯ ಹಬ್ಬವಾಗಿದೆ. ಮಹಾವಿಷ್ಣು ಯೋಗ ನಿದ್ರೆಯಲ್ಲಿರುವ ಹಿನ್ನೆಲೆಯಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಭಾಗೀರಥಿ ಜಯಂತಿ ದಿನ ಒಳಗಿಟ್ಟು ಉತ್ಥಾನ ದ್ವಾದಶಿಗಷ್ಟೇ ಹೊರತೆಗೆಯಲಾಗುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಶ್ರೀಕೃಷ್ಣನ ಮೃಣ್ಮಯ ಮೂರ್ತಿ ಬಳಸಲಾಗುತ್ತಿದೆ. ಶ್ರೀಕೃಷ್ಣ ಮಠದಲ್ಲಿ ಪೂಜೆ ಬಳಿಕ ಮೃಣ್ಮಯ ಮೂರ್ತಿಯನ್ನು ತಂದು ಸ್ವರ್ಣ ರಥದಲ್ಲಿಟ್ಟು ಪೂಜೆ, ನೈವೇದ್ಯ ಬಳಿಕ ಶ್ರೀಕೃಷ್ಣ ಲೀಲೋತ್ಸವ ಆರಂಭಿಸಲಾಗಿತ್ತು. ರಥಬೀದಿಯ ತೆಂಕು ಭಾಗದ ವೇದಿಕೆಯಲ್ಲಿ ಪರ್ಯಾಯ ಶಿರೂರು ಶ್ರೀವೇದವರ್ಧನ ತೀರ್ಥ ಶ್ರೀಪಾದರು ಹಾಗೂ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಭಕ್ತರಿಗೆ ಪ್ರಸಾದ ವಿತರಿಸಿದರು.
ಲೀಲೋತ್ಸವ ನಿಮಿತ್ತ 13 ಗುರ್ಜಿ, 2 ಮಂಟಪ ಗುರ್ಜಿಗಳಲ್ಲಿ ಮೊಸರು, ಅರಳು ಬಣ್ಣದ ನೀರ ಕುಡಿಕೆಯನ್ನ ಒಡೆಯಲಾಯಿತು. ಅನೇಕರು ಗೊಲ್ಲವೇಷಧಾರಿಗಳಾಗಿದ್ದರು. ರಥದ ಬೀದಿಯಲ್ಲಿ ಹುಲಿ ವೇಷಧಾರಿಗಳ ಅಬ್ಬರ, ಮಹಿಷ ಸಹಿತ ಹಲವು ಅಸುರ ವೇಷಧಾರಿಗಳು ಇದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ 1.50 ಲಕ್ಷ ಚಕ್ಕುಲಿ ಹಾಗೂ 1.50 ಲಕ್ಷ(ಐದು ಬಗೆ) ಉಂಡೆ ಪ್ಯಾಕೆಟ್‌ಗಳನ್ನು ಶ್ರೀಕೃಷ್ಣನ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಒಟ್ಟಾರೆ ಸಂಭ್ರಮ, ಸಡಗರದಿಂದ ನಡೆದಿತ್ತು. ಆದರೆ ಕೊನೇದಾಗಿ ಇದೊಂದು ಅವಘಡ ಆಗಿದೆ.
ಪ್ರತಿವರ್ಷವೂ ಈ ವಿಟ್ಲಪಿಂಡಿ ಉತ್ಸವವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅಂದು ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನ ರಥೋತ್ಸವದ ಬಳಿಕ ಜಾಗರೂಕತೆಯಿಂದಲೇ ವಿಸರ್ಜನೆ ಮಾಡಲಾಗುತ್ತದೆ. ಆದರೆ ಈ ಸಲ ಅವಘಡ ಅಗಿದೆ. ಶ್ರೀಕೃಷ್ಣನ ಮೂರ್ತಿ ಭಗ್ನಗೊಂಡಿದೆ. ಇದರಿಂದಾಗಿ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರಲ್ಲಿ ಆತಂಕ, ಗಾಬರಿಯ ವಾತಾವರಣ ನಿರ್ಮಾಣವಾಗಿತ್ತು.








