ಕಾಸರಗೋಡು : ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿದ್ದಂತೆಯೇ ವೃದ್ಧರೊಬ್ಬರು ಅಸ್ವಸ್ಥಗೊಂಡು ಕೊನೆಯುಸಿರೆಳೆದ ಕರುಣಾಜನಕ ಘಟನೆ ಮಂಗಳವಾರ ಕಾಸರಗೋಡಿನಲ್ಲಿ ನಡೆದಿದೆ. ಕೊಟ್ಟಾಯಂನ ಎರವಿನಲ್ಲೂರಿನ ಕರಿವೇಲಿ ಇಲ್ಲಂನ ಭಾಗವತ ಸಪ್ತಾಹ ಯಜ್ಞ ಆಚಾರ್ಯ ಹಾಗೂ ಪಾಠಕಂ ಕಲಾವಿದ ಎನ್. ದೇವದತ್ತನ್ ನಂಬೂತಿರಿ (88) ಮತ್ತು ಅವರ ಪತ್ನಿ ಗಿರಿಜಾದೇವಿ ಅಂತರ್ಜನಂ (75) ಕೆಲವೇ ಗಂಟೆಗಳ ಅಂತರದಲ್ಲಿ ನಿಧನರಾದ ದಂಪತಿ.
ವಿದ್ಯಾನಗರದ ಪರಕ್ಕಟ್ಟದಲ್ಲಿರುವ ತಮ್ಮ ಮಗನ ಮನೆಯಲ್ಲಿ ಈ ದಂಪತಿ ವಾಸವಾಗಿದ್ದರು. ಸೆಪ್ಟೆಂಬರ್ 14 ರಂದು ರಾತ್ರಿ 11:30 ರ ಸುಮಾರಿಗೆ ಗಿರಿಜಾದೇವಿ ಅಂತರ್ಜನಂ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಮಂಗಳವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ದೇವದತ್ತನ್ ನಂಬೂದಿರಿ ಅವರಿಗೆ ಪತ್ನಿಯ ಅಗಲಿಕೆಯ ವಿಚಾರವನ್ನು ತಿಳಿಸಲಾಯಿತು. ವಿಷಯ ತಿಳಿಯುತ್ತಿದ್ದಂತೆ ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲೇ ಕುಳಿತು ಭಕ್ತಿಯಿಂದ ಪ್ರಾರ್ಥನೆಗಳನ್ನು ಪಠಿಸಲು ಆರಂಭಿಸಿದ ದೇವದತ್ತನ್, ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥಗೊಂಡರು.
ಕೂಡಲೇ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದರು. ದಂಪತಿಯ ಅಗಲಿಕೆಯಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರು ತೀವ್ರ ಶೋಕಸಾಗರದಲ್ಲಿ ಮುಳುಗಿದ್ದಾರೆ. ದಂಪತಿಯ ಅಂತ್ಯಕ್ರಿಯೆಯನ್ನು ಕೊಟ್ಟಾಯಂನ ಎರವಿನಲ್ಲೂರಿನಲ್ಲಿರುವ ಅವರ ಪೂರ್ವಜರ ಮನೆಯಾದ ಕರಿವೇಲಿ ಇಲ್ಲಂನ ಆವರಣದಲ್ಲಿ ನೆರವೇರಿಸಲಾಯಿತು.








