ರಾಯಚೂರು/ಸಿಂಧನೂರು : ಸಿಂಧನೂರು ತಾಲೂಕಿನ ಕೆ.ಹಂಚಿನಾಳ ಕ್ಯಾಂಪ್‌ನಲ್ಲಿ ಬುಧವಾರ ಮುಂಜಾನೆ ಕೋಳಿ ಅಂಗಡಿಯೊಂದರ ಬಳಿ ಜಮಾಯಿಸಿದ್ದ ಬೀದಿನಾಯಿಗಳ ಹಿಂಡು, ಮನೆ ಮುಂದೆ ಆಟವಾಡುತ್ತಿದ್ದ 18 ತಿಂಗಳ ಹಸುಗೂಸಿನ ಮೇಲೆ ಏಕಾಏಕಿ ದಾಳಿ ನಡೆಸಿ ಕಚ್ಚಿ ಕೊಂದಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಅಬ್ದುಲ್ ರಜಾಕ್ ಮತ್ತು ನದಾಫ್ ದಂಪತಿಯ ಪುತ್ರಿ ಆನಂ (18 ತಿಂಗಳು) ಬೀದಿನಾಯಿಗಳ ಅಟ್ಟಹಾಸಕ್ಕೆ ಬಲಿಯಾದ ದುರ್ದೈವಿ.
ಬುಧವಾರ ಮುಂಜಾನೆ ಮನೆಯಲ್ಲಿ ಮಲಗಿದ್ದ ಮಗು ಆನಂ, ನಿದ್ದೆಯಿಂದ ಎಚ್ಚರಗೊಂಡು ಪೋಷಕರಿಗೆ ತಿಳಿಯದಂತೆ ಸದ್ದಿಲ್ಲದೆ ಮನೆಯಿಂದ ಹೊರಗೆ ರಸ್ತೆಗೆ ಬಂದಿದೆ. ಈ ವೇಳೆ ರಸ್ತೆಯ ಪಕ್ಕದಲ್ಲಿದ್ದ ಕೋಳಿ ಅಂಗಡಿಯ ಬಳಿ ತ್ಯಾಜ್ಯಕ್ಕಾಗಿ ಜಮಾಯಿಸಿದ್ದ ಬೀದಿನಾಯಿಗಳ ಹಿಂಡು ಪುಟ್ಟ ಕಂದಮ್ಮನ ಮೇಲೆ ಏಕಾಏಕಿ ಮುಗಿಬಿದ್ದಿದೆ. ನಾಯಿಗಳು ಮಗುವನ್ನು ಮನಬಂದಂತೆ ಕಚ್ಚಿ ರಸ್ತೆಯುದ್ದಕ್ಕೂ ಎಳೆದಾಡಿವೆ. ಕಂದಮ್ಮನ ಚೀರಾಟ ಕೇಳಿ ಪೋಷಕರು ಹಾಗೂ ಸ್ಥಳೀಯರು ಓಡಿ ಬರುವಷ್ಟರಲ್ಲಿ ಮಗುವಿನ ದೇಹ ರಕ್ತಸಿಕ್ತವಾಗಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು. ದುರಾದೃಷ್ಟವಶಾತ್, ಸಿಂಧನೂರಿನಿಂದ ರಾಯಚೂರಿಗೆ ಸಾಗಿಸುವ ದಾರಿ ಮಧ್ಯೆಯೇ ಮಗು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.








