ನವದೆಹಲಿ: ಕಳೆದ ವರ್ಷ ಭೀಕರವಾಗಿ ಪತನಗೊಂಡು 260 ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಏರ್ ಇಂಡಿಯಾ ಎಐ-171 ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನ ಲಾಕಿಂಗ್ ವ್ಯವಸ್ಥೆಯಲ್ಲಿ ತನಿಖಾಧಿಕಾರಿಗಳಿಗೆ ಯಾವುದೇ ದೋಷ ಅಥವಾ ಅಸಹಜತೆ ಕಂಡುಬಂದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಸಂಸತ್ಗೆ ತಿಳಿಸಿದೆ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸರ್ಕಾರ, ಏರ್ ಇಂಡಿಯಾ ಡ್ರೀಮ್ಲೈನರ್ ವಿಮಾನದ ಮೂಲ ಉಪಕರಣ ತಯಾರಕರು ನಡೆಸಿದ ಸುಧಾರಿತ ತಾಂತ್ರಿಕ ತಪಾಸಣೆಯ ನಂತರ ಈ ವಿಷಯ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಸ್ತುತ ಅಮೆರಿಕದ ಸಿಯಾಟಲ್‌ನಲ್ಲಿ ಈ ವಿಮಾನದ ಸಂಪೂರ್ಣ ಥ್ರಸ್ಟ್ ನಿಯಂತ್ರಣ ಮಾಡ್ಯೂಲ್‌ನ ತಪಾಸಣೆ ನಡೆಯುತ್ತಿರುವ ನಡುವೆಯೇ ಕೇಂದ್ರ ಸರ್ಕಾರದಿಂದ ಈ ಹೇಳಿಕೆ ಬಂದಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆಯು ತನ್ನ ಅಂತಿಮ ವರದಿ ನೀಡುವಲ್ಲಿ ಯಾವುದೇ ವಿಳಂಬ ಮಾಡಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ಬೃಹತ್ ವಿಮಾನ ಅಪಘಾತಗಳ ತನಿಖೆಯು ಸುದೀರ್ಘ ಪ್ರಕ್ರಿಯೆಯಾಗಿದ್ದು, ಎಐ-171 ವಿಮಾನದ ತನಿಖೆಯು ಪ್ರಸ್ತುತ ಅಂತಿಮ ಹಂತದಲ್ಲಿದೆ ಎಂದು ಹೇಳಿದೆ.
260 ಜನರ ಸಾವಿಗೆ ಕಾರಣವಾಗಿದ್ದ 2025ರ ಜೂನ್ನಲ್ಲಿ ನಡೆದ ಅಹಮದಾಬಾದ್ ಏರ್ ಇಂಡಿಯಾ ಎಐ-171 ವಿಮಾನ ಪತನದ ತನಿಖೆಯ ಅಂತಿಮ ವರದಿಯನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಈ ಮೊದಲು ತಿಳಿಸಿದ್ದರು. ಸರ್ಕಾರವು ತನಿಖಾ ಸಂಸ್ಥೆಗೆ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿದೆ ಎಂದು ಅವರು ಹೇಳಿದ್ದರು.








