ತುಮಕೂರು: ನಗರದ ಕಾಲ್ ಟೆಕ್ಸ್ ಸರ್ಕಲ್ ಸಮೀಪವಿರುವ ಪ್ರತಿಷ್ಠಿತ ‘ವಿಶ್ವಾಸ್ ಜ್ಯುವೆಲರಿ ಶಾಪ್’ನಲ್ಲಿ ಬರೋಬ್ಬರಿ ₹10 ಲಕ್ಷ ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳು ದಿಢೀರ್ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಚ್ಚರಿಯ ರಹಸ್ಯವೊಂದು ಬಯಲಾಗಿದೆ. ಕಳ್ಳತನ ಮಾಡಿದ್ದು ಯಾವುದೇ ಖದೀಮರಲ್ಲ, ಬದಲಿಗೆ ಸಾಧಾರಣ ‘ಇಲಿ’ ಎಂಬುದು ಬೆಳಕಿಗೆ ಬಂದಿದೆ.
ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಬೆಳಿಗ್ಗೆ ಜ್ಯುವೆಲರಿ ಶಾಪ್ ತೆರೆದಾಗ ಡಿಸ್‌ಪ್ಲೇಯಲ್ಲಿದ್ದ ಕೆಲವು ಚಿನ್ನದ ಸರಗಳು ಹಾಗೂ ವಜ್ರ ಖಚಿತ ಉಂಗುರಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಆದರೆ ಅಂಗಡಿಯ ಶಟರ್, ಬಾಗಿಲು ಅಥವಾ ಲಾಕ್ ಮುರಿದ ಯಾವುದೇ ಗುರುತುಗಳಿರಲಿಲ್ಲ. ಹೊರಗಿನಿಂದ ಯಾರಾದರೂ ಬಂದಿರುವ ಸುಳಿವು ಸಿಗದಿದ್ದಾಗ ಗಾಬರಿಗೊಂಡ ಮಾಲೀಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಸಿಸಿಟಿವಿ ಫೂಟೇಜ್ ನೋಡಿದಾಗ ಇಲಿಯೊಂದು ರಾತ್ರಿ ವೇಳೆ ಸದ್ದಿಲ್ಲದೆ ಅಂಗಡಿಯೊಳಗೆ ಓಡಾಡಿ, ಡಿಸ್‌ಪ್ಲೇಯಲ್ಲಿದ್ದ ವಜ್ರ ಹಾಗೂ ಚಿನ್ನದ ಆಭರಣಗಳನ್ನು ಒಂದೊಂದಾಗಿ ತನ್ನ ಬಾಯಿಯಲ್ಲಿ ಕಟುಕಿಕೊಂಡು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಆಭರಣಗಳಿಗೆ ಹಾಕಲಾಗಿದ್ದ ಬೆಲೆ ಮತ್ತು ತೂಕದ ಟ್ಯಾಗ್‌ಗಳನ್ನು ತಿನ್ನಲು ಬಂದಿದ್ದ ಇಲಿ, ಟ್ಯಾಗ್ ಸಮೇತ ಆಭರಣಗಳನ್ನು ಎಳೆದೊಯ್ದಿತ್ತು.
ಸಿಸಿಟಿವಿಯಲ್ಲಿ ಇಲಿ ಹೋದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದ ಜ್ಯುವೆಲರಿ ಸಿಬ್ಬಂದಿ, ಅದರ ಜಾಡು ಹಿಡಿದು ಅಂಗಡಿಯ ಮೂಲೆಯಲ್ಲಿದ್ದ ಬಿಲವನ್ನು ಪತ್ತೆಹಚ್ಚಿದರು. ತಕ್ಷಣ ಬಿಲವನ್ನು ತೋಡಿದಾಗ ಅಲ್ಲಿ 10 ವಜ್ರ ಖಚಿತ ಉಂಗುರಗಳು ಹಾಗೂ 3 ಚಿನ್ನದ ಸರಗಳು ಸೇರಿದಂತೆ ಸುಮಾರು 50 ಗ್ರಾಂಗೂ ಅಧಿಕ ತೂಕದ ಎಲ್ಲಾ ಆಭರಣಗಳು ಸುರಕ್ಷಿತವಾಗಿ ಪತ್ತೆಯಾಗಿವೆ. ಕಳೆದುಹೋದ ಎಲ್ಲಾ ಆಭರಣಗಳು ವಾಪಸ್ ಸಿಕ್ಕಿದ್ದರಿಂದ ಜ್ಯುವೆಲರಿ ಶಾಪ್ ಸಿಬ್ಬಂದಿ ಹಾಗೂ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.








