ನವದೆಹಲಿ: ಸಕ್ಕರೆ ಬೆಲೆ ಏರಿಕೆಗೂ ಎಥೆನಾಲ್ ಬಳಕೆಗೂ ಸಂಬಂಧ ಇಲ್ಲ. ದೇಶೀಯ ಉತ್ಪಾದನೆಯಲ್ಲಿನ ಇಳಿಕೆ, ಹಬ್ಬದ ಋತುವಿನಲ್ಲಿ ಹೆಚ್ಚಿದ ಬೇಡಿಕೆ ಹಾಗೂ ಜಾಗತಿಕ ಪೂರೈಕೆಯಲ್ಲಿನ ಬಿಗಿ ಕ್ರಮ ಮತ್ತು ಸಂಗ್ರಹಣೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ದೇಶೀಯ ಮಾರುಕಟ್ಟೆಯಲ್ಲಿನ ಸಕ್ಕರೆ ಬೆಲೆ ಏರಿಕೆ ಎಥೆನಾಲ್ ಬಳಕೆಗೆ ಸಂಬಂಧಿಸಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ‘ಲಭ್ಯತೆಯನ್ನು ಸುಧಾರಿಸಲು ಮತ್ತು ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಹಲವಾರು ಕ್ರಮಗಳನ್ನ ತೆಗೆದುಕೊಂಡಿದೆ. ಇದರಲ್ಲಿ ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿಗಳನ್ನು ವಿಧಿಸುವುದು ಮತ್ತು ಕಚ್ಚಾ ಸಕ್ಕರೆಯ ಸುಂಕ-ಮುಕ್ತ ಆಮದನ್ನ ಅನುಮೋದಿಸುವುದು ಸೇರಿವೆ. ಆದ್ರೆ ಎಥೆನಾಲ್ ಉತ್ಪಾದನೆಗೆ ಸಕ್ಕರೆಯನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ ಎಂದು ಹೇಳುತ್ತಿರುವುದು ತಪ್ಪು’ ಎಂದು ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಎಥೆನಾಲ್ ಉತ್ಪಾದನೆಗೆ ತಿರುಗಿಸಲಾದ ಸಕ್ಕರೆಯ ಪ್ರಮಾಣವು ವಾಸ್ತವವಾಗಿ ಕಡಿಮೆಯಾಗಿದೆ. ಸರ್ಕಾರ ಹೇಳುವಂತೆ, ಎಥೆನಾಲ್ ಉತ್ಪಾದನೆಗೆ ಬಳಸುವ ಸಕ್ಕರೆಯ ಪ್ರಮಾಣವು 2022-23 ರಲ್ಲಿ ಸುಮಾರು 12% ರಿಂದ 2025-26 ಋತುವಿನಲ್ಲಿ ಸುಮಾರು 9% ಕ್ಕೆ ಇಳಿದಿದೆ. ಭಾರತದ ಎಥೆನಾಲ್ ಉತ್ಪಾದನೆಯ ಸುಮಾರು 4ನೇ ಒಂದು ಭಾಗವು ಧಾನ್ಯಗಳಿಂದ, ವಿಶೇಷವಾಗಿ ಮೆಕ್ಕೆಜೋಳದಿಂದ ಬರುತ್ತದೆ. ಆದ್ದರಿಂದ ಸರ್ಕಾರವು ಸಕ್ಕರೆ ಬೆಲೆಯಲ್ಲಿನ ಪ್ರಸ್ತುತ ಏರಿಕೆಯನ್ನ ಎಥೆನಾಲ್ ಉತ್ಪಾದನೆಗೆ ಜೋಡಿಸುವುದು ಸರಿಯಲ್ಲ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ಈ ಋತುವಿನಲ್ಲಿ ದೇಶೀಯ ಸಕ್ಕರೆ ಉತ್ಪಾದನೆಯು ಪ್ರಮಾಣ 34.3 ದಶಲಕ್ಷ ಟನ್‌ಗಳಷ್ಟು ಆಗುತ್ತದೆ ಎಂದು ಸರ್ಕಾರ ನಿರೀಕ್ಷೆ ಮಾಡಿತ್ತು. ಆದ್ರೆ ಸುಮಾರು 30.6 ದಶಲಕ್ಷ ಟನ್‌ಗಳಷ್ಟು ಮಾತ್ರವೇ ಉತ್ಪಾದನೆ ಆಗಿದೆ. ಬೆಳೆ ರೋಗ, ಕೀಟ ಬಾಧೆ ಸಮಸ್ಯೆಗಳಿಂದ ಕೆಲವು ಪ್ರದೇಶಗಳಲ್ಲಿ ಕಬ್ಬಿನ ಬೆಳೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಕಬ್ಬಿನ ಬೆಳೆಯಲ್ಲಿ ಕೊರತೆಯಾಗಿದೆ. ಇದರೊಂದಿಗೆ ಕೆಲ ಪ್ರದೇಶಗಳಲ್ಲಿ ವಿಪರೀತ ಮಳೆ, ನೀರು ನಿಲ್ಲುವಿಕೆಯಿಂದ ಬೆಳೆ ಹಾನಿಯಾಗಿದೆ. ಇದರಿಂದ ಸಕ್ಕರೆ ಉತ್ಪಾದನೆ ಕುಸಿದಿದೆ. ಆದಾಗ್ಯೂ ಸದ್ಯಕ್ಕೆ ದೇಶಿಯ ಅವಶ್ಯಕಥೆಗಳನ್ನ ಪೂರೈಸಲು ಸದ್ಯಕ್ಕೆ ಇರುವ ಸಕ್ಕರೆ ದಾಸ್ತಾನು ಸಾಕಾಗುತ್ತದೆ ಎಂದು ಹೇಳಿದೆ.








