ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದ ಮಂಗಳಮುಖಿ ಕೊಲೆ ಕೇಸ್ ನ ತನಿಖೆ ಮುಂದುವರಿದಿದ್ದು, ಕೇವಲ 200 ರೂ ಗೆ ಹತ್ಯೆ ನಡೆದಿದೆ ಎಂಬ ಶಾಕಿಂಗ್ ಸತ್ಯ ಹೊರಬಿದ್ದಿದೆ.
ಕೇವಲ ₹200 ಹಣಕ್ಕಾಗಿ ಮಂಗಳಮುಖಿಯೊಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಘಟನೆಯು ನಗರದ ಜನತೆಯಲ್ಲಿ ಭಾರೀ ಆತಂಕ ಮೂಡಿಸಿದೆ.
ಮೃತ ಮಂಗಳಮುಖಿಯನ್ನು ದೇವಿ ಎಂದು ಗುರುತಿಸಲಾಗಿದೆ. ರಾಮಮೂರ್ತಿನಗರ ಮೂಲದ ಕುಖ್ಯಾತ ಸುಲಿಗೆಕೋರ ಗೌತಮ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ದರೋಡೆ ನಡೆಸುವ ಉದ್ದೇಶದಿಂದ ಆರೋಪಿ ಬಂದಿದ್ದನು.
ಈ ವೇಳೆ ಆರೋಪಿ ಗೌತಮ್, ದೇವಿ ಅವರ ಬಳಿ ಹಣ ನೀಡುವಂತೆ ಪೀಡಿಸಿದ್ದಾನೆ. ಆದರೆ ದೇವಿ ತಮ್ಮ ಬಳಿಯಿದ್ದ ಕೇವಲ ₹200 ಹಣವನ್ನು ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿ ಗೌತಮ್, ತನ್ನ ಬಳಿಯಿದ್ದ ಚಾಕುವಿನಿಂದ ದೇವಿ ಅವರ ಕುತ್ತಿಗೆಯ ಭಾಗಕ್ಕೆ ಆಳವಾಗಿ ಇರಿದು ಪರಾರಿಯಾಗಿದ್ದಾನೆ.
ತೀವ್ರ ರಕ್ತಸ್ರಾವದಿಂದ ದೇವಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿ ಗೌತಮ್ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.








