ಪಾರ್ಶ್ವವಾಯುವಿನಿಂದಾಗಿ ನಡೆಯಲು ಸಾಧ್ಯವಾಗದೆ ಸುಮಾರು 10 ದಿನಗಳಿಂದ ಪುತ್ರರ ಆರೈಕೆಯಲ್ಲಿದ್ದ 80 ವರ್ಷದ ವೃದ್ಧೆಯೊಬ್ಬರು, ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮೃತಪಟ್ಟರೆ ಯಾವ ಮಗನ ಮನೆಗೆ ಅಪಶಕುನವಾಗಬಹುದು ಎಂಬ ಮೂಢನಂಬಿಕೆಗೆ ಬಲಿಯಾದ ಘಟನೆ
ಮೃತರನ್ನು ನೂನೆ ವೆಂಕಟಮ್ಮ (80) ಎಂದು ಗುರುತಿಸಲಾಗಿದೆ. ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ.
ವೆಂಕಟಮ್ಮ ಅವರಿಗೆ ಹಲವು ದಿನಗಳಿಂದ ಅನಾರೋಗ್ಯವಿದ್ದು, ಪಾರ್ಶ್ವವಾಯುವಿನ ನಂತರ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ನಾಲ್ವರು ಪುತ್ರರು ಸರದಿಯಲ್ಲಿ ಅವರಿಗೆ ಆಹಾರ ಹಾಗೂ ಆರೈಕೆ ಮಾಡುತ್ತಿದ್ದರು.
ಪೊಲೀಸರ ಪ್ರಕಾರ, ಏಪ್ರಿಲ್ 5ರಂದು ವೆಂಕಟಮ್ಮ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಕುರಿತು ಕುಟುಂಬಸ್ಥರು ಚರ್ಚಿಸಿದ್ದರು. ಈ ವೇಳೆ ಅವರು ಒಬ್ಬ ಪುತ್ರನ ಮನೆಯಲ್ಲಿ ಮೃತಪಟ್ಟರೆ, ಆ ಮನೆಗೆ ಅಪಶಕುನವಾಗುತ್ತದೆ ಎಂಬ ಮೂಢನಂಬಿಕೆಯ ಮಾತು ಕೇಳಿಬಂದಿತ್ತು ಎನ್ನಲಾಗಿದೆ.
ಈ ನಂಬಿಕೆಯಿಂದ ಪ್ರಭಾವಿತರಾದ ಹಿರಿಯ ಪುತ್ರ ನೂನೆ ಸಮ್ಮಯ್ಯ ಹಾಗೂ ಕಿರಿಯ ಪುತ್ರ ನೂನೆ ಶ್ರೀನಿವಾಸ್ ಏಪ್ರಿಲ್ 6ರಂದು ಮನೆಯಲ್ಲಿದ್ದ ಇತರರು ಹೊರಗಿದ್ದ ವೇಳೆ ತಾಯಿಯನ್ನು ಮನೆಯಿಂದ ಹೊರಗೆ ಕರೆದೊಯ್ದು, ಸಮೀಪದ ಕೃಷಿ ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾವಿಯಲ್ಲಿ ಬಿದ್ದು ವೆಂಕಟಮ್ಮ ಮೃತಪಟ್ಟಿದ್ದಾರೆ.
ಆರಂಭದಲ್ಲಿ ಕುಟುಂಬಸ್ಥರು ಇದನ್ನು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಂಭವಿಸಿದ ಸಾವು ಎಂದು ಪೊಲೀಸರಿಗೆ ತಿಳಿಸಿದ್ದರು. ಆದರೆ ತನಿಖೆ ವೇಳೆ ಕುಟುಂಬ ಸದಸ್ಯರ ಹೇಳಿಕೆಗಳು ಹಾಗೂ ಚಲನವಲನಗಳ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ.
ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ವೆಂಕಟಮ್ಮ ಅವರ ಸಾವಿನಲ್ಲಿ ಸಮ್ಮಯ್ಯ ಮತ್ತು ಶ್ರೀನಿವಾಸ್ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.








