ಮಂಗಳೂರು : ಕೇರಳ ಲಾಟರಿ ಚೀಟಿಯಲ್ಲಿ 8 ಲಕ್ಷ ರೂಪಾಯಿ ಬಹುಮಾನ ಬಂದಿದೆ ಎಂದು ನಂಬಿಸಿ ಸೈಬರ್ ವಂಚಕರು ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ ಒಟ್ಟು 3.81 ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತ 42 ವರ್ಷದ ವ್ಯಕ್ತಿ ನೀಡಿದ ದೂರಿನನ್ವಯ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 14ರಂದು ಅಪರಿಚಿತ ವ್ಯಕ್ತಿಯೊಬ್ಬ ಸಂತ್ರಸ್ತರ ಮೊಬೈಲ್‌ಗೆ (9572768071) ಕರೆ ಮಾಡಿ, “ನಿಮ್ಮ ಹೆಸರಿಗೆ ಕೇರಳ ಲಾಟರಿಯಲ್ಲಿ 8,00,000 ರೂಪಾಯಿ ಹಣ ಬಂದಿದೆ,” ಎಂದು ನಂಬಿಸಿದ್ದಾನೆ. ಆ ಬಹುಮಾನದ ಹಣವನ್ನು ಪಡೆಯಬೇಕಾದರೆ ಆದಾಯ ತೆರಿಗೆ ಹಾಗೂ ಪ್ರಕ್ರಿಯೆ ವೆಚ್ಚ (Tax & Processing fees) ಪಾವತಿಸಬೇಕೆಂದು ತಿಳಿಸಿದ್ದಾನೆ.
ಅಪರಿಚಿತರ ಮಾತುಗಳನ್ನು ನಿಜವೆಂದು ನಂಬಿದ ಸಂತ್ರಸ್ತರು, ಆಗಸ್ಟ್ 15 ರಿಂದ ಆಗಸ್ಟ್ 26ರ ವರೆಗೆ ವಿವಿಧ ಹಂತಗಳಲ್ಲಿ ವಂಚಕರು ಕಳುಹಿಸಿದ ವಾಟ್ಸಾಪ್ ಕ್ಯೂಆರ್ ಕೋಡ್, ಗೂಗಲ್ ಪೇ ಹಾಗೂ ಫೋನ್ ಪೇ ಸ್ಕ್ಯಾನರ್‌ಗಳಿಗೆ ಒಟ್ಟು 3,81,300 ರೂಪಾಯಿ ಹಣವನ್ನು ವರ್ಗಾಯಿಸಿದ್ದಾರೆ.
ಇಷ್ಟಕ್ಕೇ ನಿಲ್ಲಿಸದ ಸೈಬರ್ ವಂಚಕರು, ಮತ್ತೊಂದು ಮೊಬೈಲ್ ಸಂಖ್ಯೆಯಿಂದ (9661686172) ಕರೆ ಮಾಡಿ “ನಿಮ್ಮ ಲಾಟರಿ ಬಹುಮಾನದ ಮೊತ್ತ ಈಗ ಡಬಲ್ ಆಗಿದೆ. ಆದ್ದರಿಂದ ಪುನಃ ತೆರಿಗೆ ಪಾವತಿಸಬೇಕು,” ಎಂದು ಒತ್ತಾಯಿಸಿದ್ದಾರೆ. ಇದರಿಂದ ಅನುಮಾನಗೊಂಡ ಸಂತ್ರಸ್ತರು, ತಮಗೆ ಮೋಸ ಹೋಗಿರುವುದು ಅರಿವಾಗಿ ತಕ್ಷಣವೇ ‘1930’ ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ.ಹಣ ವಾಪಸ್ ಬರಬಹುದು ಎಂದು ಕಾಯುತ್ತಿದ್ದ ಅವರು, ಯಾವುದೇ ಹಣ ಬಾರದಿದ್ದಾಗ ತಡವಾಗಿ ಪೊಲೀಸ್ ಠಾಣೆಗೆ ಆಗಮಿಸಿ ಆನ್‌ಲೈನ್ ಕೇರಳ ಲಾಟರಿ ಹೆಸರಿನಲ್ಲಿ ಸಂಘಟಿತ ಅಪರಾಧ ಎಸಗಿದ ಸೈಬರ್ ಜಾಲದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.








