ನವದೆಹಲಿ : ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಬಿಜೆಪಿ ಅಭ್ಯರ್ಥಿಯೊಬ್ಬರು ಪಡೆದ ಮತಗಳ ಸಂಖ್ಯೆ ಇಡೀ ದೇಶದ ಗಮನ ಸೆಳೆದಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕೈಲಾಶ್‌ಚಂದ್ ಅವರು ತಮ್ಮ ವಾರ್ಡ್‌ನಲ್ಲಿ ಪಡೆದದ್ದು ಕೇವಲ ಒಂದೇ ಒಂದು ಮತ! ದಿದ್ವಾನ-ಕುಚಮನ್ ಜಿಲ್ಲೆಯ ಪರ್ಬತ್ಸರ್ ಪುರಸಭೆಯ ವಾರ್ಡ್ ಸಂಖ್ಯೆ 13 ರಿಂದ ಕೈಲಾಶ್‌ಚಂದ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿ ಹಿನಾ ಖಾನಮ್ ಅವರು 376 ಮತಗಳನ್ನು ಪಡೆಯುವ ಮೂಲಕ ಈ ವಾರ್ಡ್‌ನಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಶೀದ್ ಖಾನ್ 195 ಮತಗಳನ್ನು ಪಡೆದು ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಕೈಲಾಶ್‌ಚಂದ್ ಕೇವಲ 1 ಮತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕೇವಲ ಒಂದು ಮತ ಸಿಕ್ಕಿರುವ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ (PTI) ಪ್ರತಿಕ್ರಿಯಿಸಿದ ಕೈಲಾಶ್‌ಚಂದ್, ತಮ್ಮ ಒಂದು ಮತದ ಹಿಂದಿರುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. “ನಾನು ವಾರ್ಡ್ ಸಂಖ್ಯೆ 12ರ ಮತದಾರ. ಆದರೆ ಬಿಜೆಪಿ ಪಕ್ಷವು ನನ್ನನ್ನು ಪಕ್ಕದ ವಾರ್ಡ್ 13ರಿಂದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಹೀಗಾಗಿ ನನಗೆ ನನ್ನ ವಾರ್ಡ್‌ನಲ್ಲಿ ಮತ ಚಲಾಯಿಸಲು ಮಾತ್ರ ಅವಕಾಶವಿತ್ತು. ವಾರ್ಡ್ 13ರಲ್ಲಿದ್ದ ಯಾರೋ ಒಬ್ಬರು ನನಗೆ ಮತ ಹಾಕಿದ್ದಾರೆ. ಹೀಗಾಗಿ ನನಗೆ ಆ ಒಂದು ಮತ ಬಂದಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಪರ್ಬತ್ಸರ್ ಪುರಸಭೆಯ ಒಟ್ಟು 25 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 13 ಹಾಗೂ ಬಿಜೆಪಿ 12 ವಾರ್ಡ್‌ಗಳಲ್ಲಿ ಜಯಗಳಿಸಿವೆ. ರಾಜಸ್ಥಾನದಾದ್ಯಂತ ಒಟ್ಟು 309 ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿರುವಾಗ, ಬಿಜೆಪಿ ಅಭ್ಯರ್ಥಿಯ ಈ ‘ಒಂಟಿ ಮತ’ದ ವಿಷಯ ಮಾತ್ರ ರಾಜಕೀಯ ವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ.








