ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನಂಗೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಂಪನಿ ಪ್ರಮೋಟರ್‌ನನ್ನ ಬಂಧಿಸಿದೆ ಎಂದು ವರದಿಯಾಗಿದೆ.
ಕೈಲಾಶ್ ಚಂದ್ ಮಂಗಲಾ ಬಂಧಿತ ಕಂಪನಿ ಪ್ರಮೋಟರ್. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 ರ ಸೆಕ್ಷನ್ 19ರ ಅಡಿಯಲ್ಲಿ ಶುಕ್ರವಾರ ಮಂಗಲಾನನ್ನ ಬಂಧಿಸಲಾಗಿದೆ. ಬಳಿಕ ವಿಶಾಖಪಟ್ಟಣಂ ನಲ್ಲಿರುವ ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಕೈಲಾಶ್‌ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
230 ಕೋಟಿ ಮೌಲ್ಯದ ಕಲಬೆರಕೆ ತುಪ್ಪ ಪೂರೈಕೆ
ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿತ್ತು. ಟಿಟಿಡಿಗೆ ಕಲಬೆರಕೆ ತುಪ್ಪ ಪೂರೈಸಲು ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪಗಳು ಎಫ್‌ಐಆರ್ ಉಲ್ಲೇಖವಾಗಿದ್ದವು.
ಪಾಮ್ ಎಣ್ಣೆ, ರಾಸಾಯನಿಕ ಬಳಸಿ ಕಲಬೆರಕೆ ತುಪ್ಪ ತಯಾರಿ
ಇನ್ನೂ ಇಡಿ ತನಿಖೆಯ ಪ್ರಕಾರ, ರಿಫೈನ್ಡ್ ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್, ಪಾಮೋಲಿನ್ ಸೇರಿದಂತೆ ಎಂಜಿ-90, ಮೊನೊಗ್ಲಿಸರೈಡ್ಸ್, Myvaset Soft 400 ಮತ್ತು ಅಸಿಟಿಕ್ ಆಸಿಡ್ ಎಸ್ಟರ್ ಮುಂತಾದ ಹಲವು ರಾಸಾಯನಿಕಗಳನ್ನ ಬಳಸಿ ಕಲಬೆರಕೆ ತುಪ್ಪ ತಯಾರಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ನಂತರ ಈ ಉತ್ಪನ್ನವನ್ನ ‘Agmark Special Grade Cow Ghee’ ಎಂದು ಹೆಸರಿಸಿ ಟಿಟಿಡಿಗೆ ಪೂರೈಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
2019 ರಿಂದ 2024 ರ ಅವಧಿಯಲ್ಲಿ ಈ ವಂಚನೆ ನಡೆದಿದ್ದು, ಒಟ್ಟು 230 ಕೋಟಿ ಮೌಲ್ಯದಷ್ಟು ಕಲಬೆರಕೆ ತುಪ್ಪ ಪೂರೈಕೆ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. ಇದರಲ್ಲಿ ಸುಮಾರು 96 ಕೋಟಿ ಮೌಲ್ಯದ ಕಲಬೆರಕೆ ತುಪ್ಪವನ್ನ ಕೈಲಾಶ್ ಚಂದ್ ಮಂಗಲಾ ಖುದ್ದು ಉತ್ಪಾದಿಸಿದ್ದ ಎಂದೂ ಕೂಡ ಇಡಿ ಹೇಳಿದೆ.
ನಕಲಿ ದಾಖಲೆಗಳ ಸೃಷ್ಟಿ
ಎಂ/ಎಸ್ ಸುಕೃತಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಮೋಟರ್ ಆಗಿರುವ ಕೈಲಾಶ್ ಚಂದ್ ಮಂಗಲಾ ಈ ಪ್ರಕರಣದಲ್ಲಿ ಸಹ ಸಂಚುಕೋರನಾಗಿದ್ದಾನೆ ಎಂದು ED ಆರೋಪಿಸಿದೆ. ಕಲಬೆರಕೆ ಪದಾರ್ಥಗಳ ಖರೀದಿಗೆ ಕೈಲಾಶ್ ನೆರವಾಗಿದ್ದು, ತಮ್ಮ ಕಾರ್ಖಾನೆಯಲ್ಲಿ ಕಲಬೆರಕೆ ತುಪ್ಪ ತಯಾರಿಸಿದ್ದ. ಎಂದು ಇಡಿ ಹೇಳಿದೆ.
ಅಲ್ಲದೆ, ಮೆಸರ್ಸ್ ಶ್ರೀ ವೈಷ್ಣವಿ ಡೈರಿ ಸ್ಪೆಷಾಲಿಟೀಸ್ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಮಲ್ಗಂಗಾ ಮಿಲ್ಕ್ ಮತ್ತು ಅಗ್ರೋ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮೆಸರ್ಸ್ ಎಆರ್ ಡೈರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಗಳ ಮೂಲಕ ಕಲಬೆರಕೆ ತುಪ್ಪ ಪೂರೈಕೆ ಮಾಡಿದ್ದಾನೆ. ಕಲಬೆರಕೆ ತುಪ್ಪ ಮಾರಾಟಕ್ಕಾಗಿ ನಕಲಿ ದಾಖಲೆಗಳನ್ನೂ ಸೃಷ್ಟಿಸಿದ್ದ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.
ಸದ್ಯ ಕಂಪನಿ ಪ್ರಮೋಟರ್‌ನನ್ನ ಬಂಧಿಸಿರುವ ಇಡಿ ಮುಂದಿನ ತನಿಖೆ ಕೈಗೊಂಡಿದೆ.








