ಬೆಂಗಳೂರು: ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ಎರಡು ವಾರ ಕಳೆದರೂ ಅದ್ವೈತ್ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಆತನ ದಿನಚರಿ, ಹವ್ಯಾಸ, ಸ್ನೇಹ-ಸಂಪರ್ಕ ಹಾಗೂ ಆಧ್ಯಾತ್ಮಿಕ ಆಸಕ್ತಿ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಅದ್ವೈತ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಇದುವರೆಗೆ ಯಾವುದೇ ಖಚಿತ ಕುರುಹು ಸಿಕ್ಕಿಲ್ಲ. ಅದೇ ರೀತಿ ಆತ ದೈಹಿಕವಾಗಿ ಬೆಟ್ಟದಿಂದ ಹೊರಹೋಗಿರುವ ಬಗ್ಗೆಯೂ ಸ್ಪಷ್ಟ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ತನಿಖೆ ವೇಳೆ ಪೊಲೀಸರು ಅದ್ವೈತ್‌ನ ದಿನಚರಿ, ಹವ್ಯಾಸ ಮತ್ತು ವೈಯಕ್ತಿಕ ಆಸಕ್ತಿಗಳ ಕುರಿತು ಕೂಲಂಕುಷವಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಅವನ ದಿನನಿತ್ಯದ ಚಟುವಟಿಕೆಗಳು, ಯಾರೊಂದಿಗೆ ಸಂಪರ್ಕದಲ್ಲಿದ್ದ, ಯಾವ ಸ್ಥಳಗಳಿಗೆ ಭೇಟಿ ನೀಡುತ್ತಿದ್ದ ಮತ್ತು ಯಾವ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಎಂಬುದನ್ನು ಆಧರಿಸಿ ಪೊಲೀಸರು ತನಿಖೆಯ ದಿಕ್ಕನ್ನು ಬದಲಿಸಿದ್ದಾರೆ.
ಅದ್ವೈತ್ ಆಗಾಗ ಕೆಲವು ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಸಂಬಂಧಿತರೊಂದಿಗೆ ಚರ್ಚಿಸುತ್ತಿದ್ದ ಎನ್ನಲಾಗಿದೆ. ಅದರಲ್ಲೂ ಓಶೋ ವಿಚಾರಗಳಿಂದ ಮತ್ತು ಓಶೋ ಅವರ ತತ್ವಗಳಿಂದ ಆತ ಪ್ರಭಾವಿತನಾಗಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಓಶೋ ಹಾಗೂ ಅವರ ವಿಚಾರಧಾರೆಗೆ ಸಂಬಂಧಿಸಿದ ಕೆಲವು ಪುಸ್ತಕಗಳು ಅದ್ವೈತ್ ಬಳಿ ಇದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಿವಗಂಗೆ ಸುತ್ತಮುತ್ತಲಿನ ಆಶ್ರಮಗಳು ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸ್ಥಳಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.
ಕೆಲ ದಿನಗಳ ಕಾಲ ಯಾರಿಗೂ ತಿಳಿಯದಂತೆ ಉಳಿದುಕೊಳ್ಳಬಹುದಾದ ಸ್ಥಳಗಳು ಅಥವಾ ವ್ಯಕ್ತಿಗಳೊಂದಿಗೆ ಅದ್ವೈತ್ ಸಂಪರ್ಕ ಹೊಂದಿದ್ದನೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದ್ವೈತ್‌ನ ಹಿಂದಿನ ಚಲನವಲನ, ಸಂಪರ್ಕಗಳು ಹಾಗೂ ಆತನಿಗೆ ಪರಿಚಯವಿದ್ದ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.








